ಜೈಪುರ, ಡಿ.12- ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ರಾಜಸ್ಥಾನದ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು ಭಜನ್ ಲಾಲ್ ಶರ್ಮಾ ಅವರು ನೂತನ ಮುಖ್ಯ ಮಂತ್ರಿ ಯಾಗಿ ಆಯ್ಕೆಯಾಗಿದ್ದಾರೆ.
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಭಜನ್ ಲಾಲ್ ಶರ್ಮ ಅವರಿಗೆ ಸಿಎಂ ಪಟ್ಟ ನೀಡುವ ಮೂಲಕ ಬಿಜೆಪಿ ಹೈಕಮಾಂಡ್ ಇಡೀ ದೇಶದ ಜನರಲ್ಲಿ ಅಚ್ಚರಿ ಮೂಡಿಸಿದೆ.
ರಾಜಸ್ಥಾನದ ಸಾಂಗನೇರ್ ಕ್ಷೇತ್ರದಿಂದ ಮೊದಲ ಬಾರಿಗೆ ಭಜನ್ ಲಾಲ್ ಶರ್ಮ ಶಾಸಕರಾಗಿದ್ದಾರೆ.ಅಲ್ಲದೆ ಶರ್ಮ ಬಿಜೆಪಿ ಕಾರ್ಯದರ್ಶಿ ಕೂಡಾ ಆಗಿದ್ದಾರೆ.
ಮುಖ್ಯ ಮಂತ್ರಿ ಆಯ್ಕೆ ಜತೆಗೆ ರಾಜಸ್ಥಾನಕ್ಕೆ ಇಬ್ಬರು ಉಪ ಮುಖ್ಯಮಂತ್ರಿಗಳನ್ನೂ ಆಯ್ಕೆ ಮಾಡಲಾಗಿದೆ.
ರಾಜಕುಮಾರಿಯಾಗಿರುವ ದಿಯಾಕುಮಾರಿ ಮತ್ತು ಪ್ರೇಮ್ ಚಂದ್ ಬೈರವ್ ಉಪ ಮುಖ್ಯ ಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ.
ವಸುಂದರರಾಜೇ ಸಿಂಧ್ಯಾ ಅವರಿಗೇ ಮುಖ್ಯ ಮಂತ್ರಿ ಪಟ್ಟ ಒಲಿಯಲಿದೆ ಎಂದೇ ಹೇಳಲಾಗಿತ್ತು,ವಸುಂದರ ಕೂಡಾ ತಮಗೇ ಸಿಎಂ ಪಟ್ಟ ಸಿಗಲಿದೆ ಎಂದುಕೊಂಡಿದ್ದರು.
ಆದರೆ ಬಿಜೆಪಿ ಹೊಸ ಮುಖಗಳಿಗೆ ಮಣೆ ಹಾಕಿರುವುದು ವಿಶೇಷ,ಹಾಗಾಗಿ ವಸುಂದರಾ ಸಹಜವಾಗಿ ಕುಪಿತಗೊಂಡಿದ್ದಾರೆ.

