ಬಿಜೆಪಿಯದ್ದು ಅಭಿವೃದ್ಧಿ ಶೂನ್ಯ ಸಾಧನೆ: ಸಿದ್ದರಾಮಯ್ಯ ಟೀಕೆ

ಮೈಸೂರು: ತಾವೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 200 ಸೀಟುಗಳನ್ನು ಗೆಲ್ಲುವುದೂ ಕಷ್ಟ ಎನ್ನುವುದು ಗೊತ್ತಾಗಿದೆ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು.

ನಿಜ ಗೊತ್ತಾಗಿದ್ದರಿಂದಲೇ ತಂತ್ರಗಾರಿಕೆ ಕಾರಣದಿಂದ 400 ಸೀಟು ಗೆಲ್ಲುವುದಾಗಿ ಹೇಳುತ್ತಿದೆ,ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರು ಜನರೆದುರು ಮೂರ್ಖರಾಗುತ್ತಾರೆ ಎಂದು ಸಿಎಂ ಎಚ್ಚರಿಸಿದರು.

ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ,ಬಿಜೆಪಿಯದ್ದು ಅಭಿವೃದ್ಧಿ ಶೂನ್ಯ ಸಾಧನೆ. ಮೋದಿಯವರ ಸುಳ್ಳಿನ ಪಿಕ್ಚರ್ ಇನ್ನೂ ಬಾಕಿ ಇದೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಸೀಟುಗಳವರೆಗೆ ಗೆದ್ದೇ ಗೆಲ್ಲುತ್ತದೆ. ಸೋಲುವ ಭಯದಿಂದ ಬಿಜೆಪಿಯವರು ಕರ್ನಾಟಕದಲ್ಲಿ ಬಿಜೆಪಿ 28 ಸೀಟುಗಳನ್ನು ಗೆಲ್ಲುತ್ತುದೆ, ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು

ಯತೀಂದ್ರ ಅವರಿಗೆ ಸಂಸ್ಕಾರದ ಪಾಠವನ್ನು ಬಿಜೆಪಿ ಹೇಳುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಬಿಜೆಪಿಯವರಿಗೆ ಸಂಸ್ಕಾರವಿಲ್ಲ. ಯತೀಂದ್ರ ಅವರು ಸಿಬಿಐ ನವರು ಕೊಟ್ಟಿರುವ ರಿಪೋರ್ಟ್ ಆಧಾರದ ಮೇಲೆ ಹೇಳಿಕೆಯನ್ನು ನೀಡಿದ್ದಾರೆಯೇ ಹೊರತು, ಅಮಿತ್ ಶಾ ಅವರಿಗೆ ಅವಮಾನ ಮಾಡುವ ಉದ್ದೇಶ ಅವರಿಗೆ ಇಲ್ಲ ಎಂದು ಉತ್ತರಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಇತರೆ ಪಕ್ಷಗಳಿಂದ ಜನರು ಬರುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಜನರು ಸೇರ್ಪಡೆಯಾಗಲು ಉತ್ಸುಕರಿದ್ದಾರೆ. ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿ ಬರುವ ಎಲ್ಲರಿಗೂ ಸ್ವಾಗತವಿದೆ ಎಂದು‌ ಸಿಎಂ ಹೇಳಿದರು.

ರಾಜ್ಯದಲ್ಲಿ ಪ್ರಧಾನಿ ಮೋದಿಯವರು ರ್‍ಯಾಲಿ ಪ್ರಾರಂಭಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಪ್ರಚಾರ ಕೈಗೊಂಡಿದ್ದರೂ ಬಿಜೆಪಿ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲಾ ಎಂದರು.

ಅಚ್ಚೇ ದಿನ್ ಆಯೇಗಾ, ಪೆಟ್ರೋಲ್, ಡೀಸಲ್ ಬೆಲೆ ಕಡಿಮೆ ಮಾಡುತ್ತೇವೆಂದು ಹೇಳಿ ಕಡಿಮೆ ಮಾಡಿದರೆ ಎಂದು ಸಿದ್ದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳ ಗರ್ವಭಂಗವಾಗಬೇಕೆಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದು, ನನಗೆ ಯಾವ ಗರ್ವವೂ ಇಲ್ಲ, ದೇವೇಗೌಡರು ಹೇಳಿದ್ದಕ್ಕೆ ಹೇಳಿಕೆ ನೀಡಿದ್ದೇನೆ ಅಷ್ಟೇ ಎಂದರು.

ಮೋದಿಯವರೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ದೇವೇಗೌಡರು ಹೇಳಿದ್ದಾರೆ, ಹಾಗಾದರೆ ಮೇಕೆದಾಟು ಅಣೆಕಟ್ಟು ಮಾಡಿಸಲಿ ಎಂದು ಸವಾಲು ಹಾಕಿದರು ಸಿದ್ದರಾಮಯ್ಯ‌