ಬೆಳಗಾವಿ: ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಕಡಿಮೆ ಇರುವುದು ತಲಾ ಆದಾಯದಲ್ಲಿ ಹಿಂದುಳಿಯಲು ಒಂದು ಕಾರಣ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಉತ್ತರ ನೀಡಿದ ಸಿಎಂ
ತಲಾ ಆದಾಯದಲ್ಲಿ ಕಲ್ಬುರ್ಗಿ ಅತ್ಯಂತ ಹಿಂದುಳಿದಿದೆ ಎಂದು ಹೇಳಿ
ತಲಾ ಆದಾಯದ ಜಿಲ್ಲಾವಾರು ಪಟ್ಟಿಯನ್ನು ಸದನದ ಮುಂದಿಟ್ಟರು.
ನಂಜುಂಡಪ್ಪ ಅವರ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ, ಸಮೀಕ್ಷೆ ನಡೆಸುವ ಸರ್ಕಾರದ ಕಾಳಜಿ ಮತ್ತು ಮಹತ್ವವನ್ನು ಸಿಎಂ ವಿವರಿಸಿದರು.
ಈ ಬಾರಿ ಅಧಿವೇಶನ ಪ್ರಾರಂಭವಾಗಿ ಎರಡನೆ ದಿನದಿಂದಲೇ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ.ಈ ಕಾರಣಕ್ಕಾಗಿ ವಿರೋಧ ಪಕ್ಷದವರೂ ಸಹ ಸರ್ಕಾರವನ್ನೂ ಹಾಗೂ ಸಭಾಧ್ಯಕ್ಷರನ್ನು ಅಭಿನಂದಿಸಿದ್ದಾರೆ. ನಾನೂ ಕೂಡಾ ಸಭಾಧ್ಯಕ್ಷರನ್ನು ಅಭಿನಂದಿಸುತ್ತೇನೆ. ಇದೊಂದು ದಾಖಲೆ ಎಂದು ಬಣ್ಣಿಸಿದರು.
ಉತ್ತರ ಕರ್ನಾಟಕ ವಿಷಯಗಳ ಕುರಿತು 39 ಜನ ಸದಸ್ಯರು ಭಾಗವಹಿಸಿ 17 ಗಂಟೆಗಳಿಗೂ ಹೆಚ್ಚಿನ ಕಾಲ ಚರ್ಚೆ ಮಾಡಿದ್ದಾರೆ ಯಾರು ಎಷ್ಟು ಗಂಟೆ ಚರ್ಚೆ ಮಾಡಿದರೆಂದು ವಿವರ ನೀಡಿದರು.
ಹಿಂದಿನ ಯುಪಿಎ ಸರ್ಕಾರ ನಿರ್ಮಲ ಭಾರತ್ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಉದ್ದೇಶಿಸಿತ್ತು. 2013-14 ರ ಬಜೆಟ್ ನಲ್ಲೆ 4260 ಕೋಟಿ ರೂಗಳನ್ನು ಒದಗಿಸಿತ್ತು. 2013 ರ ವೇಳೆಗೆ ಸುಮಾರು ಶೇ.38-40 ರಷ್ಟು ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಮೋದಿಯವರು ನಿರ್ಮಲ್ ಭಾರತ್ ಯೋಜನೆಯನ್ನು ಸ್ವಚ್ಛ ಭಾರತ್ ಮಿಷನ್ ಎಂದು ಬದಲಾಯಿಸಿದರು. 2019-20 ರ ವೇಳೆಗೆ ಶೇ.90 ರಷ್ಟು ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾದವೆಂದು ವರದಿ ಹೇಳುತ್ತದೆ.
ಈ ವಿಚಾರದ ಕುರಿತು ವಿಶ್ವಬ್ಯಾಂಕ್ ಆಸಕ್ತಿಯ ಸಂಗತಿಯೊಂದನ್ನು ಅಧ್ಯಯನಗಳ ಮೂಲಕ ಬಹಿರಂಗಗೊಳಿಸಿದೆ. 2021-21 ರಲ್ಲಿ ಶೇ. 90 ರಷ್ಟು ಶೌಚಾಲಯಗಳಿದ್ದರೂ ಸಹ ಶೌಚಾಲಯಗಳನ್ನು ಬಳಸುವವರ ಪ್ರಮಾಣ ಶೇ. 65 ರಷ್ಟು ಮಾತ್ರ.2018-19 ರಲ್ಲಿ ಶೇ.74 ರಷ್ಟು ಜನ ಶೌಚಾಲಯ ಬಳಸುತ್ತಿದ್ದರೆ 21 ರ ವೇಳೆಗೆ ಶೇ.9 ರಷ್ಟು ಕಡಿಮೆಯಾಯಿತು. ಇದಕ್ಕೆ ಕಾರಣಗಳೇನು ಎಂದು ಸಿಎಂ ಪ್ರಶ್ನಿಸಿದರು.
ನಮ್ಮ ಜೇವರ್ಗಿ ಕ್ಷೇತ್ರದ ಶಾಸಕರು ಮಹಿಳೆಯರ ಬಹಿರ್ದೆಸೆಗೆ ಅಡ್ಡ ಗೋಡೆಗಳನ್ನು ನಿರ್ಮಿಸಬೇಕಾಗಿದೆ ಎಂದು ಕೇಳುತ್ತಿದ್ದಾರೆ. ಶೌಚಾಲಯಗಳಿದ್ದಾವಲ್ಲ ಅಂದೆ ನಾನು. ಜನ ಬಳಸುವುದಿಲ್ಲ ಸಾರ್ ಎನ್ನುತ್ತಿದ್ದಾರೆ. ಇದಕ್ಕೆ ಏನು ಹೇಳುವುದು. ಸರ್ಕಾರ ಅನುದಾನ ನೀಡಿ ಶೌಚಾಲಯ ಕಟ್ಟಿಸಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ ನಲ್ಲಿಗಳನ್ನು ಅಳವಡಿಸಿ ನೀರನ್ನೂ ಸರಬರಾಜು ಮಾಡಲಾಗುತ್ತಿದೆ. ಆದರೂ ಜನ ಬಳಸುವುದಿಲ್ಲ ಎನ್ನುತ್ತಾರೆ. ಹೇಗೆ ಈ ಸಮಸ್ಯೆಯನ್ನು ಸರಿ ಪಡಿಸುವುದು ಇವೆಲ್ಲ ಸರಳವಾದ ಸಂಗತಿಗಳಲ್ಲ. ಇವಕ್ಕೆ ಪರಿಹಾರಗಳನ್ನು ನಾವುಗಳು ಹುಡುಕಬೇಕಾಗಿದೆ. ಬಾಲ್ಯ ವಿವಾಹ ಮಾಡಬಾರದು. ಮಾಡಿದರೆ ಕಠಿಣ ಶಿಕ್ಷೆಗಳಿವೆ ಎಂಬ ಕಾನೂನುಗಳಿವೆ. ಆದರೆ ಇಡೀ ಆಡಳಿತಾಂಗದ ಕಣ್ಣು ತಪ್ಪಿಸಿ ಮದುವೆ ಮಾಡಿ ಬಿಡುತ್ತಾರೆ. ಇದರಿಂದ ಬಾಲ ಗರ್ಭಿಣಿಯರಾಗುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಬಾಲ ಗರ್ಭಿಣಿಯರ ಹೊಟ್ಟೆಯಲ್ಲಿ ಹುಟ್ಟುವ ಕೂಸುಗಳು ಅಪೌಷ್ಟಿಕತೆಯ ಸಮಸ್ಯೆಯನ್ನು ಎದುರಿಸುತ್ತವೆ. ಜನರಿಗೆ ಎಲ್ಲ ತಿಳುವಳಿಕೆ ಇದ್ದೂ ಈ ರೀತಿ ಮಾಡುತ್ತಾರೆ. ಆದ್ದರಿಂದಲೆ ಪ್ರತಿ ಬಾರಿ ಡಿಸಿ ಸಿಇಒ ಸಭೆ ಮಾಡಿದಾಗಲೂ ನಾನು ಈ ವಿಚಾರವನ್ನು ಪ್ರಸ್ತಾಪಿಸಿ ಕಠಿಣವಾಗಿ ತಡೆಗಟ್ಟಿ ಎಂದು ಹೇಳುತ್ತಲೇ ಇದ್ದೇನೆ ಎಂದರು.
ನಾವು ತಲಾದಾಯವನ್ನು ಅಭಿವೃದ್ಧಿಯ ಮಾನದಂಡವಾಗಿರಿಸಿಕೊಳ್ಳುತ್ತೇವೆ. ತಲಾದಾಯವೆಂದರೆ ಒಟ್ಟಾರೆ ಆ ಜಿಲ್ಲೆಯ ಒಟ್ಟು ಉತ್ಪನ್ನವನ್ನು ಲೆಕ್ಕ ಹಾಕಿ ಅದನ್ನು ಆ ಜಿಲ್ಲೆಯ ಎಲ್ಲಾ ಜನರಿಗೆ ಡಿವೈಡ್ ಮಾಡಿದಾಗ ಸಿಗುವ ಮೌಲ್ಯವಾಗಿರುತ್ತದೆ. ಹೆಚ್ಚು ಇಂಡಸ್ಟ್ರಿಯಲೈಸ್ ಆದ, ಕಮರ್ಷಿಯಲೈಸ್ ಆದ ಜಿಲ್ಲೆಗಳ ತಲಾದಾಯ ಹೆಚ್ಚಿರುತ್ತದೆ. ಹೆಚ್ಚು ಕೃಷಿಯನ್ನು ಅವಲಂಬಿಸಿದ ಜಿಲ್ಲೆಗಳಲ್ಲಿ ಕಡಿಮೆ ಇರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾಲ್ಕನೇ ಗುಂಪಿನ ಜಿಲ್ಲೆಗಳ ಸುಧಾರಣೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಹಾಗೂ ಚಿತ್ರದುರ್ಗ ಜಿಲ್ಲೆ ಕಡೆಯ ಕೆಟಗರಿಯಲ್ಲಿ ಬರುತ್ತವೆ. ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲಗಳ ತಲಾದಾಯವು 4 ನೇ ಗುಂಪಿನ ಜನರ ತಲಾದಾಯಕ್ಕೆ ಸಮೀಪದಲ್ಲೆ ಇದೆ.
ಆದರೂ ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನರ ತಲಾದಾಯ ಅದರಲ್ಲೂ ಕಲ್ಯಾಣ ಕರ್ನಾಟಕದ ಜನರ ತಲಾದಾಯ ಕಡಿಮೆ ಇರಲು ಕಾರಣಗಳೇನು? ಎಂದು ಹುಡುಕುತ್ತಾ ಹೋದರೆ ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇದೆ. ನೀವು ಸಲಹೆ ಕೊಡಬೇಕಾಗಿರುವುದು ಇಂಥ ವಿಚಾರಗಳನ್ನೆ ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ಈ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ 3.52 ಕೆಜಿ ಮಾತ್ರ.
ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ.
ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಉಡುಪಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹದ ಪ್ರಮಾಣ ದಿನಕ್ಕೆ 22.4 ಲೀಟರುಗಳು.
ರಾಜ್ಯದಲ್ಲಿ ಸರಾಸರಿ 1 ಕೋಟಿ ಲೀ.ಗಳು. ಇದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಸಂಗ್ರಹ 10.45 ಲಕ್ಷ ಲೀಟರ್ ಮಾತ್ರ. ಇನ್ನುಳಿದ ಹಾಲು ಉಳಿದ 17 ಜಿಲ್ಲೆಗಳ ಸುಮಾರು 4 ಕೋಟಿ ಜನರು ಸಂಗ್ರಹಿಸುತ್ತಾರೆ.
ಈ ಕಾರಣದಿಂದಲೆ ನಾವು ಈ ವರ್ಷದ ಬಜೆಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ನೀಡಲು ತೀರ್ಮಾನಿಸಿದ್ದೇವೆ.
ಇದರ ಜೊತೆಗೆ ಲೀಪ್ ಎಂಬ [ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ] ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಅಭಿವೃದ್ಧಿ ಎಂಬುದು ಕ್ಷಣಾರ್ಧದಲ್ಲಿ ಸಾಧ್ಯವಾಗಿಬಿಡಬಹುದಾದ ವಿದ್ಯಮಾನವಲ್ಲ. ನಿರಂತರವಾಗಿ ಹಠತೊಟ್ಟ ಹಾಗೆ ಸಾಧಿಸಬೇಕಾದ ಸಂಗತಿ. ಇದಕ್ಕೆ ಜನರೂ ಸಹ ಒಗ್ಗೂಡಬೇಕು. ಮನೋಭಾವದಲ್ಲಿ ಬದಲಾವಣೆ ತಂದುಕೊಳ್ಳಬೇಕು.
ಆರ್. ಅಶೋಕ್ ಅವರು ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಪ್ರಣಾಳಿಕೆಯಲ್ಲಿ ಹೇಳಿದ್ದ ಒಂದು ಲೀಟರಿಗೆ 7 ರೂಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಕೊಡಲಿಲ್ಲ ಎಂದು ಆರೋಪಿಸಿದರು. ಇದು ಪೂರ್ತಿ ನಿಜವಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೇವೆ. ಒಮ್ಮೆ ಮೂರು ರೂಪಾಯಿ ಮತ್ತೊಮ್ಮೆ 4 ರೂಪಾಯಿಗಳು. ಇದರ ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿಯಿದ್ದ 630 ಕೋಟಿ ರೂಪಾಯಿಗಳನ್ನೂ ರೈತರಿಗೆ ನೀಡಿದ್ದೇವೆ. 2023-24 ರಿಂದ 2025-26 ರವರೆಗೆ 4048 ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದ್ದೇವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಪ್ರೋತ್ಸಾಹಧನ ಮಾತ್ರ ಬಾಕಿ ಇದೆ. ಬಾಕಿ ಇರುವ ಶೀಘ್ರವಾಗಿ ಬಿಡುಗಡೆ ಮಾಡುತ್ತೇವೆ.
2013-14 ರಲ್ಲಿ ನಮ್ಮ ಸರ್ಕಾರ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ತಂದು 3 ರೂ ಇದ್ದ ಪ್ರೋತ್ಸಾಹ ಧನವನ್ನು 5 ರೂಗೆ ಹೆಚ್ಚಿಸಿತ್ತು. ಅದನ್ನು 7 ರೂಗಳಿಗೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡುತ್ತೇವೆ. ನಾವು ಇದನ್ನೆಲ್ಲ ಮಾಡಿದ ಕಾರಣಕ್ಕಾಗಿಯೇ ಹಾಲಿನ ಉತ್ಪಾದನೆ ಬಿಜೆಪಿ ಸರ್ಕಾರದ ಅವಧಿಗಿಂತ ಸುಮಾರು 25-30 ಲಕ್ಷ ಲೀಟರುಗಳಷ್ಟು ಹಾಲನ್ನು ಪ್ರತಿ ದಿನ ರೈತರು ನಮ್ಮ ಡೈರಿಗಳಿಗೆ ಕೊಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ 75 ಲಕ್ಷ ಲೀಟರುಗಳಿಗೆ ಇಳಿದಿದ್ದ ಹಾಲಿನ ಸಂಗ್ರಹ ಈಗ 1.05 ಕೋಟಿ ಲೀಟರುಗಳ ವರೆಗೆ ಏರಿಕೆಯಾಗಿದೆ.
ಅನುಗ್ರಹ ಯೋಜನೆ
ರೂಗಳಿಗೆ ಹೆಚ್ಚಿಸಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿAದ ಇಲ್ಲಿಯವರೆಗೆ ರೂ.58 ಕೋಟಿಗಳನ್ನು ಮಾಲೀಕರಿಗೆ ಪರಿಹಾರ ನೀಡಿದ್ದೇವೆ.
ನಮ್ಮ ಸರ್ಕಾರವು ಸಾಮಾಜಿಕ ನ್ಯಾಯ ಹಾಗೂ ಪ್ರಾದೇಶಿಕ ಸಮತೋಲನವನ್ನು ಆದ್ಯತೆಯ ಸಂಗತಿಗಳಾಗಿ ಪರಿಗಣಿಸುತ್ತದೆ. ಪ್ರಾದೇಶಿಕ ಸಮತೋಲನ ಸಾಧಿಸಬೇಕಾದರೆ ಅಸಮತೋಲನವನ್ನು ಹೋಗಲಾಡಿಸಬೇಕು,
ಅಸಮತೋಲನ ಉಂಟಾಗುವುದಕ್ಕೆ ಕಾರಣಗಳನ್ನು ಕಂಡುಕೊಳ್ಳಬೇಕು, ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿದ್ದಾಗ ಮಾತ್ರ ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸುವ ಕುರಿತು ಚಿಂತನೆಗಳನ್ನು ನಡೆಸಿದೆ ಹಾಗೂ ಅನುಷ್ಠಾನಗಳನ್ನು ಮಾಡಿವೆ ಎಂದು ಸಿದ್ದರಾಮಯ್ಯ ಸಮರ್ಥಿಸಿದರು.

