ಅಂಜಲಿ ಹತ್ಯೆ:ಸರ್ಕಾರ, ಹುಬ್ಬಳ್ಳಿ ಪೊಲೀಸರ ವಿರುದ್ದ ನಿರಂಜನ ಹಿರೇಮಠ ಆಕ್ರೋಶ

ಹುಬ್ಬಳ್ಳಿ : ತಮ್ಮ ಬಡಾವಣೆಯಲ್ಲಿ ಯುವತಿ ಹತ್ಯೆ ಆಗಿರುವುದಕ್ಕೆ ಕಾಂಗ್ರೆಸ್ ಕಾರ್ಪೋರೆಟರ್ ನಿರಂಜನ ಹಿರೇಮಠ ಹುಬ್ಬಳ್ಳಿ ಪೊಲೀಸರು ಹಾಗೂ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ನನ್ನ ವಾರ್ಡ್‌ನಲ್ಲಿ ಇಂತಹ ಘಟನೆಯಾಗಿದೆ ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ನನ್ನ ಮಗಳು ನೇಹಾ ಹತ್ಯೆ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ,ಅಷ್ಟರಲ್ಲೇ ಅಂಜಲಿ ಅಂಬಿಗೇರಾಳ ಹತ್ಯೆ ನಡೆದಿದೆ, ನನ್ನ ಮಗಳು ಹತ್ಯೆಯಾದಾಗಲೇ ಈ ರೀತಿಯ ಮತ್ತೊಂದು ಘಟನೆಯಾಗಬಾರದು ಅಂತ ಹೇಳಿದ್ದೆ ಆದರೂ ಹೇಯ ಘಟನೆ ನಡೆದಿದೆ ಇದಕ್ಕೆ ಇಲ್ಲಿನ ಪೊಲೀಸ್ ಆಯುಕ್ತರೇ ಕಾರಣ ಎಂದು ಆರೋಪಿಸಿದರು.

ಹುಬ್ಬಳ್ಳಿ ಪೊಲೀಸ್ ಕಮೀಷನರ್‌ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಹೋಗಲಿ ಎಂದು ಕಿಡಿಕಾರಿದರು.

ಅಂಜಲಿ ನನ್ನ ಮಗಳು ಇದ್ದ ಹಾಗೆ,ನನ್ನ ಮಗಳು ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು ಅದೇ ರೀತಿ ಇವಳ ಹತ್ಯೆಯನ್ನ ಖಂಡಿಸ ಬೇಕು ಎಂದು ನಿರಂಜನ ಹಿರೇಮಠ ಕರೆ ನೀಡಿದರು.

ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಎಲ್ಲಾ ಕಡೆ ಯುವಕರು ಗಾಂಜಾ ಅಫೀಮು ತೆಗೆದು ಕೊಂಡಿ ದಾರಿ ತಪ್ಪುತ್ತಿದ್ದಾರೆ. ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟದಲ್ಲೂ ಉತ್ತರಪ್ರದೇಶ, ಹೈದರಾಬಾದ್‌ ಮಾದರಿಯಲ್ಲೇ ಎನ್‌ಕೌಂಟರ್‌ ಆದರೆ ಒಳಿತಾಗ ಬಹುದು, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ನಮ್ಮ ರಾಜ್ಯಕ್ಕೂ ಅಗತ್ಯವಿದೆ ಎಂದು ನಿರಂಜನ ಹಿರೇಮಠ ಅಭಿಪ್ರಾಯಪಟ್ಟರು.