ಗೃಹ ಇಲಾಖೆಯನ್ನ ಯಾರೋ ಹೈಜಾಕ್‌‌ ಮಾಡಿದ್ದಾರೆ:ಅಶೋಕ್

ಬೆಂಗಳೂರು: ಗೃಹ ಇಲಾಖೆ ಡಾ.ಜಿ.ಪರಮೇಶ್ವರ್‌ ಕೈನಲ್ಲಿಲ್ಲ ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಮಾರ್ಮಿಕವಾಗಿ ನುಡಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು‌ ಭೇಟಿ ಮಾಡಿ ಜನ್ಮದಿನದ ಶುಭ ಕೋರಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಕೊಲೆ, ಕಳ್ಳತನ, ದರೋಡೆ ಹೆಚ್ಚಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ ಇದಕ್ಕೆ ಕಾಂಗ್ರೆಸ್ಸೇ ನೇರ ಕಾರಣ ಎಂದು ಟೀಕಾಪ್ರಹಾರ ನಡೆಸಿದರು.

ಇತ್ತೀಚೆಗೆ ಹತ್ಯೆಯಾದ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರಾನೆ ಅಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು ಎಂದು ‌ಹೇಳಿದರು.

ದೇವರಾಜೇಗೌಡ ಸ್ವತಃ ಹೇಳಿಕೆ ನೀಡಿ, ಡಿ.ಕೆ.ಶಿವಕುಮಾರ್‌ ಅವರ ಧ್ವನಿಮುದ್ರಣ ಬಿಡುಗಡೆ ಮಾಡಿದ್ದಾರೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದು, ಅದಕ್ಕಾಗಿಯೇ ಅವರ ಬಂಧನ ಮಾಡಲಾಗಿದೆ ಎಂದು ದೂರಿದರು.

ಸುರ್ಜೇವಾಲ, ಡಿ.ಕೆ.ಶಿವಕುಮಾರ್‌, ಸಿಎಂ ಸಿದ್ದರಾಮಯ್ಯ ಸೇರಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಇದೇ ರೀತಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ಆದರೆ ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ, ಪೊಲೀಸರು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳುತ್ತಾರೆ ಎಂದು ಆರೋಪಿಸಿದರು.

ಪ್ರಜ್ವಲ್‌ ರೇವಣ್ಣ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ,ಆದರೆ ವೀಡಿಯೋ ಹಂಚಿದವರ ವಿರುದ್ಧ ಕ್ರಮ ಏಕೆ ವಹಿಸಿಲ್ಲ ಎಂದು ಪ್ರಶ್ನಿಸಿದ ಅಶೋಕ್, ಕಾಂಗ್ರೆಸ್‌ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದರೆ ಪ್ರಕರಣವನ್ನು ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆ ಎಂದು ಆರೋಪಿಸಿದರು.