ಮೈಸೂರು: ವ್ಯಕ್ತಿಯೊಬ್ಬ ಮೊದಲ ಪತ್ನಿ ಇದ್ದರೂ ವಿಚ್ಛೇದನ ನೀಡಿರುವುದಾಗಿ ನಖಲಿ ದಾಖಲೆ ಸೃಷ್ಟಿಸಿ ಎರಡನೇ ಮದುವೆಯಾಗಿ ಪತ್ನಿಗೆ 50 ಲಕ್ಷ ರೂ ವಂಚಿಸಿದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಂಚನೆಗೆ ಒಳಗಾದ ಪತ್ನಿ ರೋಜಾ ಎಂಬುವರು ಪತಿ ಶರತ್ ರಾಮ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಂಚಕ ಶರತ್ ರಾಮ್ ತಲೆಮರೆಸಿಕೊಂಡಿದ್ದಾನೆ.
ಕುವೆಂಪುನಗರದಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ರೋಜಾ ಮೊದಲ ಪತಿಯಿಂದ ಕಾರಣಾಂತರದಿಂದ ವಿಚ್ಛೇದನ ಪಡೆದಿದ್ದಾರೆ.ಮಗನಿಗೆ ಆಸರೆಗಾಗಿ ಎರಡನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿ ಡೈವೋರ್ಸ್ ಮ್ಯಾಟ್ರಿಮೋನಿ ಆಪ್ ಮೂಲಕ ಪ್ರಯತ್ನಿಸಿದ್ದಾರೆ.
ಆಗ ಕೇರಳ ರಾಜ್ಯದ ತ್ರಿಶೂರ್ ನ ಶರತ್ ರಾಮ್ ಪರಿಚಯವಾಗಿ ಮದುವೆ ಮಾಡಿಕೊಳ್ಳಲು ಒಪ್ಪಿದ್ದಾನೆ.ಅದ್ದೂರಿ ಮದುವೆ ಬದಲು ರಿಜಿಸ್ಟರ್ ಮದುವೆ ಮಾಡಿಕೊಳ್ಳಲು ಇಬ್ಬರೂ ತೀರ್ಮಾನಿಸಿದ್ದಾರೆ.
ಈ ವೇಳೆ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವುದಾಗಿ ಶರತ್ ರಾಮ್ ನ್ಯಾಯಾಲಯದ ಆದೇಶದ ಪ್ರತಿ ಕೊಟ್ಟಿದ್ದಾನೆ.
ಇದನ್ನ ನಂಬಿದ ರೋಜಾ ಮದುವೆಗೆ ಒಪ್ಪಿ ಆತನ ಜೊತೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ.ದೇವಾಲಯದಲ್ಲಿ ವಿವಾಹ ಕೂಡಾ ಆಗಿದ್ದಾರೆ.
2022 ರಲ್ಲಿ ಪರಿಚಯವಾದ ನಂತರ ಶರತ್ ರಾಮ್ ರೋಜಾ ಅವರಿಂದ ಹಂತಹಂತವಾಗಿ 50 ಲಕ್ಷ ಹಣ ಪಡೆದಿದ್ದಾನೆ.ನಂತರ ಪಿಜಿ ಯಿಂದ ಬಂದ ಹಣಕ್ಕೂ ಪೀಡಿಸಿದ್ದಾನೆ.
ಜೊತೆಗೆ ರೋಜಾ ಹೆಸರಲ್ಲಿ ಎರಡು ಕಂಪನಿಗಳನ್ನ ಆರಂಭಿಸಿ ಸಾರ್ವಜನಿಕರಿಂದಲೂ ಹಣ ಸಂಗ್ರಹಿಸಿ ವಂಚಿಸಿದ್ದಾನೆ.
ಈತನ ವರ್ತನೆಯಿಂದ ಅನುಮಾನಗೊಂಡ ರೋಜಾ ಪರಿಶೀಲಿಸಿದಾಗ ವಿಚ್ಛೇದನ ಕಾಪಿ ನಖಲಿ ಆಗಿರುವುದು ಖಚಿತವಾಗಿದೆ.ಅಲ್ಲದೆ ಶರತ್ ರಾಮ್ ಕೇರಳಾದಲ್ಲಿ ವಾಸವಿರುವ ಮೊದಲ ಪತ್ನಿ ಜೊತೆ ಇನ್ನೂ ಸಂಪರ್ಕದಲ್ಲಿರುವುದು ಸಹ ಖಚಿತವಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆಂದು ರೋಜಾ ದೂರಿದ್ದಾರೆ.
ಈಗಾಗಲೇ ಈತನ ವಿರುದ್ದ ಹಲವಾರು ವಂಚನೆ ಪ್ರಕರಣಗಳಿರುವುದು ಸಹ ಬೆಳಕಿಗೆ ಬಂದಿರುವುದಾಗಿ ರೋಜಾ ಆರೋಪಿಸಿದ್ದಾರೆ.ಶರತ್ ರಾಮ್ ವಿರುದ್ದ ಪ್ರಕರಣ ದಾಖಲಿಸಿರುವ ರೋಜಾ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.