ಕಾಣೆಯಾಗುತ್ತೇವೆ ಎಂಬ ಭಯದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ-ಪರಮೇಶ್ವರ್

ಬೆಂಗಳೂರು: ನಮ್ಮ ಸರ್ಕಾರದ ವಿರುದ್ಧ ಜನರ ಆಕ್ರೋಶ ಇಲ್ಲ,ಬಿಜೆಪಿಯವರು ಕಾಣೆ ಯಾಗುತ್ತೇವೆ ಎಂಬ ಭಯದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಟೀಕಿಸಿದರು.

ಸೋಮವಾರದಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ ಪ್ರಾರಂಭವಾದ ವಿಚಾರಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ನಮ್ಮ ಸರ್ಕಾರದ ಯಶಸ್ಸು ತಡೆಯಲು ಆಗುತ್ತಿಲ್ಲ. 2 ವರ್ಷಗಳಿಂದ ಒಳ್ಳೆ ಆಡಳಿತ ಕೊಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳನ್ನ ನಾವು ಯಶಸ್ವಿಯಾಗಿ ಜಾರಿ ಮಾಡಿದ್ದೇವೆ. ನಮ್ಮ ಆಡಳಿತ, ಗ್ಯಾರಂಟಿ ಅನುಷ್ಠಾನ ಜನರಿಗೆ ಸಮಾಧಾನ ತಂದಿದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಬ್ಯಾಲೆನ್ಸ್ ಬಜೆಟ್ ಕೊಟ್ಟಿದ್ದಾರೆ. ಇದಕ್ಕೆ ಜನ ಮನ್ನಣೆ ಕೊಟ್ಟಿದ್ದಾರೆ. ಇದನ್ನೆಲ್ಲಾ ಬಿಜೆಪಿ ಅವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿ ತಾವು ಕಳೆದು ಹೋಗುತ್ತೇವೆ ಎಂದು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಮ್ಮ ಸರ್ಕಾರದ ವಿರುದ್ಧ ಯಾವ ಜನರೂ ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಬಿಜೆಪಿಯವರು ಮಾತ್ರ ಆಕ್ರೋಶ ಮಾಡುತ್ತಿದ್ದಾರೆ ಅಷ್ಟೆ. ಆಕ್ರೋಶ ಅಂದರೆ ಜನ ಬೀದಿ ಬೀದಿಯಲ್ಲಿ ಮಾಡಬೇಕು. ನಮ್ಮ ಸರ್ಕಾರದ ವಿರುದ್ಧ ಈ ರೀತಿ ಆಗಿಲ್ಲ,ಬಿಜೆಪಿಯವರು ಆಕ್ರೋಶ ಮಾಡುತ್ತಿದ್ದಾರೆ ಮಾಡಲಿ ಎಂದು ಪರಮೇಶ್ವರ್‌ ಅಸಮಾಧಾನದಿಂದ ನುಡಿದರು.