ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಶಿಕ್ಷಕ ಅರೆಸ್ಟ್

ಮೈಸೂರು: ಮಕ್ಕಳಿಗೆ‌ ಬುದ್ದಿ ಹೇಳಿ‌ ಭವಿಷ್ಯದ ಪ್ರಜೆಗಳನ್ನಾಗಿ ರೂಪಿಸಬೇಕಾದ ನಾವು ದೇವರೆಂದೇ ಪೂಜಿಸುವ ಶಿಕ್ಷಕ ಬುದ್ದಿಗೇಡಿ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ

ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೈಸೂರು ವಿಜಯನಗರ ಠಾಣೆ ಪೊಲೀಸರು ಶಿಕ್ಷಕನೊಬ್ಬನನ್ನು ಬಂಧಿಸಿದ್ದಾರೆ.

ಲೈಂಗಿಕ ಕಿರುಕುಳದ ಬಗ್ಗೆ ಬರೋಬ್ಬರಿ 20 ವಿದ್ಯಾರ್ಥಿನಿಯರು ದೂರು ಸಲ್ಲಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮೂಲತಃ ತಿ.ನರಸೀಪರ ನಿವಾಸಿ ಹಾಗೂ ನಗರದ ವಿಜಯನಗರದಲ್ಲಿನ ಖಾಸಗಿ ಅನುದಾನಿತ ಪ್ರೌಢಶಾಲೆಯಲ್ಲಿ ತೋಟಗಾರಿಕೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಎಂ.ಶಿವಮೂರ್ತಿನನ್ನು ಬಂಧಿಸಲಾಗಿದೆ.

ಕೃತ್ಯದ ಬಗ್ಗೆ ಕೂಡಲೇ ಇಲಾಖೆಯ ಗಮನಕ್ಕೆ ತರದೆ ತಡ ಮಾಡಿದ ಆರೋಪದಲ್ಲಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧವೂ ದೂರು ದಾಖಲಾಗಿದೆ.

ಪ್ರೌಢಶಾಲೆ ವ್ಯಾಸಂಗಕ್ಕಾಗಿ ಬಿಸಿಎಂ ಹಾಗೂ ಇನ್ನಿತರ ಸರ್ಕಾರಿ ಹಾಸ್ಟೆಲ್ ಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ವಿದ್ಯಾರ್ಥಿನಿಯರು ಉಳಿದುಕೊಂಡಿದ್ದರು.

ಕಳೆದ ಕೆಲ ದಿನಗಳ ಹಿಂದಿನಿಂದಲೂ ಶಿಕ್ಷಕ ಶಿವಮೂರ್ತಿ, ಮಕ್ಕಳಿಗೆ ಆಗಿಂದಾಗ್ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಈ ಸಂಬಂದ ಮಾರ್ಚ್ 14ರಂದು ಅಲ್ಲಿನ ಸುಮಾರು 20 ವಿದ್ಯಾರ್ಥಿನಿಯರು ಶಾಲೆಯ ಶಿಕ್ಷಕಿಯೊಬ್ಬರಿಗೆ ಮಾಹಿತಿ ನೀಡಿದ್ದಾರೆ.

ಅವರು ತಕ್ಷಣವೇ ಮುಖ್ಯ ಶಿಕ್ಷಕರಿಗೆ ವಿಚಾರ ತಿಳಿಸಿದ್ದಾರೆ. ಈ ಸಂಬಂದ ಸಂತ್ರಸ್ತ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ವರದಿ ನೀಡುವಂತೆ ಅವರು ಶಿಕ್ಷಕಿಯರಿಗೆ ತಿಳಿಸಿದ್ದಾರೆ.

ಅವರು ಮಾ.17 ರಂದು ಮುಖ್ಯ ಶಿಕ್ಷಕರಿಗೆ ವರದಿ ನೀಡಿದ್ದಾರೆ. ಆದರೆ ಶಿಕ್ಷಕ ಶಿವಮೂರ್ತಿ  ವಿದ್ಯಾರ್ಥಿನಿಯರ ಆರೋಪವನ್ನು ನಿರಾಕರಿಸಿದ್ದಾರೆ.

ಆದರೂ ಈ ಸಂಬಂದ ಮುಖ್ಯ ಶಿಕ್ಷಕರು ಸಂಸ್ಥೆಯ ಆಡಳಿತ ಮಂಡಳಿಗೆ ಮಕ್ಕಳು ಬರೆದಿದ್ದ ದೂರು ಪತ್ರ ಹಾಗೂ ಶಿಕ್ಷಕಿಯರು ನೀಡಿದ್ದ ವರದಿಯನ್ನು ಸಲ್ಲಿಸಿದ್ದಾರೆ.

ಈ ನಡುವೆ ಅಲ್ಲಿನ ಮಕ್ಕಳಲ್ಲಿ ಕೆಲವರು ಮಕ್ಕಳ ಸಹಾಯವಾಣಿಗೆ ವಿಚಾರ ಮುಟ್ಟಿಸಿದ್ದಾರೆ.

ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಡಿಡಿಪಿಐಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯಪ್ರೌವೃತ್ತರಾದ ಡಿಡಿಪಿಐ ಜವರೇಗೌಡ ಅವರು ಸಂಬಂದಪಟ್ಟ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಅವರಿಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ.

ಕೂಡಲೇ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಸರಿಯಾದ ಸಮಯಕ್ಕೆ ವಿಚಾರ ಮುಟ್ಟಿಸದ ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ವಿಜಯನಗರ ಪೊಲೀಸ್ ಠಾಣೆಗೆ ತೆರಳಿ ಏ. 4ರಂದು ಶಿಕ್ಷಕ ಶಿವಮೂರ್ತಿ ಹಾಗೂ ಮುಖ್ಯಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.

ಈಗ ಶಿವಮೂರ್ತಿ ಅವರ ಮೇಲೆ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಅನುದಾನಿತ ಶಾಲೆಯಾದ ಕಾರಣ ನಾವು ನೇರವಾಗಿ ಕ್ರಮ ತಗೆದುಕೊಳ್ಳಲು ಬರುವುದಿಲ್ಲ. ಬಿಇಒ ನೀಡಿರುವ ವರದಿ ಅನ್ವಯ ಶಿವಮೂರ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಲೆಯ ಆಡಳಿತ ಮಂಡಳಿಗೆ ಪತ್ರ ಬರೆಯಲಾಗುವುದು,ಅವರು ಆತನ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದಾರೆ ಎಂಬುದನ್ನು ನಮಗೆ ವರದಿ ಮೂಲಕ ತಿಳಿಸಲಿದ್ದಾರೆ ಎಂದು ಡಿಡಿಪಿಐ ಎಸ್.ಟಿ.ಜವರೇಗೌಡ ತಿಳಿಸಿದ್ದಾರೆ.