ಬಿಜೆಪಿ, ಆರ್.ಎಸ್.ಎಸ್ ಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ:ಸಿಎಂ

ಶ್ರೀರಂಗಪಟ್ಟಣ,ಮೇ.2: ಬಿಜೆಪಿ ಮತ್ತು ಆರ್.ಎಸ್.ಎಸ್ ನವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತೂಬಿನಕೆರೆ ಹೆಲಿಫ್ಯಾಡ್ ನಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಸಿಎಂ, ನೂರು ವರ್ಷಗಳ ಇತಿಹಾಸ ನೋಡಿದರೆ ಆರ್ ಎಸ್ ಎಸ್ ನವರು ಯಾವಾಗಲೂ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಲೇ ಬಂದವರು ಎಂದು ಟೀಕಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಿಲ್ಲರ್ ಆಯೋಗದಿಂದ ಹಿಡಿದು ಇಂದಿನವರೆಗೆ ವಿರೋಧ ಮಾಡುತ್ತಲೇ ಬಂದಿದ್ದಾರೆ. ಆರ್.ಎಸ್.ಎಸ್.
1925 ರಂದು ಪ್ರಾರಂಭವಾಗಿದ್ದು 2025 ಕ್ಕೆ ನೂರು ವರ್ಷಗಳಾಗುತ್ತಿದೆ.ಅವರು ಮೀಸಲಾತಿಯನ್ನು ಎಂದೂ ಒಪ್ಪಿಲ್ಲ ಎಂದು ದೂರಿದರು.

ರಾಹುಲ್ ಗಾಂಧಿ ಯವರು ಎರಡು ವರ್ಷಗಳಿಂದ ಈ ಬಗ್ಗೆ ಬಹಳ ಗಂಭೀರವಾಗಿ ಒತ್ತಾಯ ಮಾಡುತ್ತಿದ್ದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಸೇರಿಸಲು ಅವರೇ ಕಾರಣರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರಿಗೆ ಪತ್ರವನ್ನೂ ಬರೆದಿದ್ದರು. ಈ ಎಲ್ಲರ ಹೋರಾಟ ಮತ್ತು ಒತ್ತಡದ ನಂತರ ಜಾತಿಗಣತಿ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಯಾವಾಗ ಎಂದು ಸಮಯ ನಿಗದಿ ಮಾಡಿಲ್ಲ. ಜನಗಣತಿಯಲ್ಲಿಯೇ ಜಾತಿ ಗಣತಿಯನ್ನು ಮಾಡುವುದಾಗಿ ಹೇಳಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆಗಬೇಕು. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿಯ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಬೇಕು ಎಂದು ಸಿಎಂ ಒತ್ತಾಯಿಸಿದರು.

ಸರ್ವೋಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಶೇ.50 ಕಿಂತ ಹೆಚ್ಚಬಾರದು ಎಂದು ಹೇಳಿದೆ. ಮೀಸಲಾತಿ ಶೇ 50 ಆದರೆ, ಜನಸಂಖ್ಯೆಯ ಅನುಗುಣ ವಾಗಿ ಮೀಸಲಾತಿ ನೀಡಬೇಕು ಎಂದು ಹೇಳಿದರು.

ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕಾಗಿರುವುದು ಅತ್ಯಂತ ಅನಿವಾರ್ಯ ಮತ್ತು ಅಗತ್ಯ. ಸಮ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಬೇಕು. ಆಗ ಮಾತ್ರ ಜಾತಿಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.

ಮೀಸಲಾತಿಯಲ್ಲಿ ಶೇ.50 ರಷ್ಟು ಗರಿಷ್ಠ ಪರಿಮಿತಿ ಯನ್ನು ತೆಗೆಯಬೇಕು, ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿಯನ್ನು ತರಬೇಕೆಂದು ಪ್ರಧಾನಿ ಗಳನ್ನು ಒತ್ತಾಯಿಸುವುದಾಗಿ ಸಿಎಂ ತಿಳಿಸಿದರು.

ಸಮೀಕ್ಷೆಯ ಸಮಯವನ್ನು ನಿಗದಿ ಮಾಡಬೇಕು. ನ್ಯಾಯಮೂರ್ತಿ ರೋಹಿಣಿ ಸಮಿತಿಯ ಶಿಫಾರಸುಗಳನ್ನೂ ಜಾರಿಗೊಳಿಸುವ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನೂ ಕೈಗೊಳ್ಳಬೇಕು ಎಂದರು.

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದ್ದು, ಪದೇಪದೇ ಕೋಮು ಗಲಭೆಗಳಾಗುತ್ತಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ, ಕೊಲೆ ಗೀಡಾದ ವ್ಯಕ್ತಿ ರೌಡಿಶೀಟರ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ, ಈ ಬಗ್ಗೆ ಎಡಿಜಿಪಿ (ಕಾನೂನು ಸುವ್ಯವಸ್ಥೆ) ಅವರೊಂದಿಗೆ ಮಾತನಾಡಿ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ,ಮನುಷ್ಯನ ಪ್ರಾಣ ಬಹಳ ಮುಖ್ಯ. ಕೂಡಲೇ ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದು ಉತ್ತರಿಸಿದರು ಸಿದ್ದರಾಮಯ್ಯ.

ವಿಧಾನಸಭಾಧ್ಯಕ್ಷ ಯು.ಟಿ .ಖಾದರ್ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ ನನಗೂ ಬೆದರಿಕೆ ಕರೆಗಳು ಬರುತ್ತವೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿ, ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.