ಬೆಂಗಳೂರು: ಒಂದು ನೇಮಕಾತಿ ಪರೀಕ್ಷೆಯನ್ನೆ ನೆಟ್ಟಗೆ ನಡೆಸಲು ‘ಕೈ’ಲಾಗದಿರುವ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ಇದ್ದರೆಷ್ಟು ಸತ್ತರೆಷ್ಟು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳ ಗಾಗಿದ್ದಾರೆ. ಈಗ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆ ಎರಡು ದಿನಗಳ ಮುಂಚೆಯೇ ಸೋರಿಕೆ ಆಗಿತ್ತು ಎನ್ನುವ ಸುದ್ದಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಮರ್ಮಾಘಾತ ನೀಡಿದೆ ಎಂದು ಟ್ವೀಟ್ ಮಾಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ ಒಂದು ಸ್ಪರ್ಧಾತ್ಮಕ ಪರೀಕ್ಷೆಯನ್ನ ನೆಟ್ಟಗೆ ನಡೆಸಲಾಗದ ತಾವು ಯಾವ ಸೀಮೆ ಮುಖ್ಯಮಂತ್ರಿ ಸ್ವಾಮಿ ಎಂದು ಜರಿದಿದ್ದಾರೆ.
ತಮ್ಮ ಕೈಯಲ್ಲಿ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಲಕ್ಷಾಂತರ ಉದ್ಯೋಗಾಕಾಂಕ್ಷಿ ಗಳಿಗೆ ಈ ರೀತಿ ಪದೇ ಪದೇ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಶೋಕ್ ಕಿಡಿಕಾರಿದ್ದಾರೆ.