ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯ

ಬಳ್ಳಾರಿ: ಓಬಳಾಪುರಂ ಅಕ್ರಮ ಗಣಿಗಾರಿಕೆ ಮತ್ತು ಗಡಿ ಒತ್ತುವರಿ ಪ್ರಕರಣದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಜನಾರ್ಧನ ರೆಡ್ಡಿ ಅಪರಾಧಿ ಎಂದು ನ್ಯಾಯಾಲಯ ಪ್ರಕಟಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹೈದರಾಬಾದ್ ನಾಮಪಲ್ಲಿಯಲ್ಲಿರೋ ಸಿಬಿಐ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದ್ದು ಜನಾರ್ಧನ ರೆಡ್ಡಿ ಸೇರಿ 5 ಮಂದಿ ಜೈಲು ಶಿಕ್ಷೆ ಅನುಭವಿಸಲಿದ್ದಾರೆ.

ಈಗಾಗಲೇ ಜನಾರ್ಧನ ರೆಡ್ಡಿ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಪ್ರಕರಣಲ್ಲಿ ಆರೋಪಿಗಳಾಗಿದ್ದ ಆಂಧ್ರಪ್ರದೇಶದ ಮಾಜಿ ಸಚಿವೆ ಸಬಿತಾ ಇಂದ್ರ ರೆಡ್ಡಿ ಮತ್ತು ಕೃಷ್ಣಾನಂದಗೆ ಬಿಗ್‌ ರಿಲೀಪ್‌ ಸಿಕ್ಕಿದೆ.

ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಸೋಮವಾರವೇ ಹೈದರಾಬಾದ್ ಗೆ ತೆರಳಿದ್ದರು.ಮಂಗಳವಾರ ವಿಚಾರಣೆ ನಡೆಸಿದ ನಾಮಪಲ್ಲಿಯಲ್ಲಿರೋ ಸಿಬಿಐ ಕೋರ್ಟ್ ಜನಾರ್ದನ ರೆಡ್ಡಿ ದೋಷಿ ಎಂದು ತೀರ್ಪು ಪ್ರಕಟಿಸಿ,7ವರ್ಷ ಶಿಕ್ಷೆಯ ಪ್ರಮಾಣವನ್ನು ಕೂಡ ಘೋಷಿಸಿದೆ.

ಪ್ರಕರಣದಲ್ಲಿ A1 ಓಎಂಸಿ ಎಂಡಿ ಶ್ರೀನಿವಾಸ ರೆಡ್ಡಿ, A2 ಜನಾರ್ದನ ರೆಡ್ಡಿ, A3 ರಾಜಗೋಪಾಲ್ ರೆಡ್ಡಿ, A4 ಅಲಿಖಾನ್ ಅಪರಾಧಿಗಳೆಂದು ಪ್ರಕಟಿಸಲಾಗಿದೆ.

ಬೆಳಿಗ್ಗೆ ದಾಖಲಾತಿ ಪರಿಶೀಲಿಸಿದ ಕೋರ್ಟ್ ಮಧ್ಯಾಹ್ನದ ನಂತರ ತೀರ್ಪು ಪ್ರಕಟಿಸಿತು. ತೀರ್ಪು ಬಳಿಕ ರೆಡ್ಡಿ ಒಂದು ಕ್ಷಣ ಕುಸಿದು ಹೋದರು ಎಂದು ವರದಿ ತಿಳಿಸಿದೆ.

ಹೈದರಾಬಾದ್‌ ಸಿಬಿಐ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಜನಾರ್ಧನ ರೆಡ್ಡಿ ಹೈಕೋರ್ಟ್ ಹೋಗುವ ಸಾಧ್ಯತೆ ಇದೆ.

ಒಂದು ವೇಳೆ ಹೈಕೋರ್ಟ್ ನಿಂದ ಜನಾರ್ದನರೆಡ್ಡಿ ಪರವಾಗಿ ತೀರ್ಪು ಬಂದರೆ ಸಮಸ್ಯೆ ಆಗುವುದಿಲ್ಲ. ಶಾಸಕ ಸ್ಥಾನ ಉಳಿಯಲಿದೆ. ಒಂದು ವೇಳೆ ರೆಡ್ಡಿ ವಿರುದ್ಧವಾಗಿ ತೀರ್ಪು ಬಂದರೆ ಶಾಸಕ ಸ್ಥಾನ ರದ್ದಾಗಲಿದೆ,ಜತೆಗೆ ಜೈಲು ಸೇರುವುದು ಖಚಿತ

ಕರ್ನಾಟಕ – ಆಂಧ್ರಪ್ರದೇಶದ ಗಡಿಯಲ್ಲಿರುವ ಓಬಳಾಪುರಂ ಗಣಿಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಒಎಂಸಿಯಿಂದ ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕಬ್ಬಿಣದ ಅದಿರನ್ನು ವಿವೇಚನಾರಹಿತವಾಗಿ ಗಣಿಗಾರಿಕೆ ನಡೆಸಿದೆ ಎಂಬ ಆರೋಪಗಳಿತ್ತು.

ಅಕ್ರಮ ಸುಲಿಗೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ಆಂಧ್ರದಲ್ಲಿ ಪ್ರಕರಣ ದಾಖಲಾಗಿತ್ತು. ಜೊತೆಗೆ ಕರ್ನಾಟಕ ಮತ್ತು ಆಂಧ್ರದ ಗಡಿಯನ್ನು ವಿರೂಪಗೊಳಿಸಿದ ಆರೋಪ ಕೂಡ ರೆಡ್ಡಿ ಮತ್ತು ಆಂಧ್ರದ ಪ್ರಭಾವಿಗಳ ಮೇಲಿತ್ತು.

ಗಡಿ ಗುರುತು ನಾಶ ಮತ್ತು ಅರಣ್ಯ ಕಾಯಿದೆ ಉಲ್ಲಂಘನೆಯ ಆರೋಪದ ಮೇಲೆ ಸೆಕ್ಷನ್ 120 ಮತ್ತು 120ಬಿ ಅನ್ವಯ ಗಾಲಿ ರೆಡ್ಡಿ ಹಾಗೂ ಶ್ರೀನಿವಾಸ್ ರೆಡ್ಡಿ ಬಂಧನವಾಗಿತ್ತು.