ಬೆಂಗಳೂರು: ಎಲ್ ಪಿ ಜಿ ಸಿಲಿಂಡರ್ ಅಭಾವವನ್ನು ನೀಗಿಸಲು ಹೊರದೇಶದಿಂದ ಅನಿಲ ಪೂರೈಕೆಯಂತಹ ಪರ್ಯಾಯ ಮಾರ್ಗಕ್ಕೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ವಿಧಾನಮಂಡಲದಲ್ಲಿ ಸರ್ಕಾರದ ವತಿಯಿಂದ ಈ ಬಗ್ಗೆ ಈಗಾಗಲೇ ಉತ್ತರ ನೀಡಲಾಗಿದೆ.ಆಹಾರಕ್ಕಾಗಿ ಹೋಟೆಲ್ ಗಳ ಮೇಲೆ ಅವಲಂಬಿತರಾಗುವ ಜನಸಂಖ್ಯೆ ಸಾಕಷ್ಟಿದೆ. ಹೋಟೆಲ್ ವ್ಯವಸ್ಥೆ ಸ್ಥಗಿತಗೊಂಡರೆ, ಜನಜೀವನ ಅಸ್ತವ್ಯಸ್ಥವಾಗುತ್ತದೆ. ಕೇಂದ್ರ ಸಚಿವ ಹರದೀಪಸಿಂಗ ಪುರಿ ಯವರು ಎಲ್ ಪಿ ಜಿ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮಾತ್ರ ಎಲ್ ಪಿ ಜಿ ಪೂರೈಕೆ ದೊಡ್ಡ ಸಮಸ್ಯೆಯಾಗಿದೆ ಎಂದು ಬಿಜೆಪಿಯ ನಾಯಕರು ಟೀಕಿಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ರಾಜ್ಯ ಬಿಜೆಪಿಯವರು ಸುಮ್ಮನೆ ಮಾತನಾಡುವ ಬದಲು, ಎಲ್ ಪಿ ಜಿ ಸಿಲಿಂಡರ್ ಹೆಚ್ಚಿನ ಸರಬರಾಜಿಗೆ ಕ್ರಮ ವಹಿಸಲಿ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.

