ಆಪರೇಷನ್ ಸಿಂಧೂರ: ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ನವದೆಹಲಿ: ಪಹಲ್ಗಾಮ್ ದುಷ್ಕೃತ್ಯಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು ಮುಂಜಾನೆ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನ ಹಾಗೂ ಉಗ್ರರಿಗೆ ಶಾಕ್ ನೀಡಿದೆ.

ನಿಷೇಧಿತ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳನ್ನು ಆಪರೇಷನ್ ಸಿಂಧೂರ್’ ಅಡಿಯಲ್ಲಿ ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಅಡಗುತಾಣಗಳ ಮೇಲೆ ಭಾರತೀಯ ಸೇನೆ ಬೆಳಗಿನ ಜಾವ ಸುಮಾರು 1.30ರಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳಾದ
ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರಗಳ ಮೇಲೆ ಕರಾರುವಾಕ್ ದಾಳಿ ಮಾಡಲಾಗಿದೆ.

ಮುರ್ಡಿಕೆಯಲ್ಲಿರುವ ನಿಷೇಧಿತ ಲಷ್ಕರ್-ಎ-ತೈಬಾಗೆ ಸೇರಿದ
ಮರ್ಕಜ್ ತೈಬಾ, ಬರ್ನಾಲಾದಲ್ಲಿರುವ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್‌ನ ಶ್ವಾವೈ ನಲ್ಲ ಶಿಬಿರ ಮತ್ತು ಕೋಟ್ಲಿಯಲ್ಲಿರುವ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳಾದ
ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ಮೆಹಮೂನಾ ಜೋಯಾ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಹತ್ಯೆ ಮಾಡಿದ ಎರಡು ವಾರಗಳ ನಂತರ ಆಪರೇಷನ್ ಸಿಂಧೂರ್ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗಿದ್ದು,ಹಲವಾರು ಉಗ್ರರು ಮೃತಪಟ್ಟಿದ್ದಾರೆ.