ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಸಿಎಂ ಸಿದ್ದರಾಮಯ್ಯ ಸಲಾಂ

ಬೆಂಗಳೂರು: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಮೊದಲಿಗೆ ಇಡೀ ದೇಶ ಮತ್ತು ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ,ಈ ದಾಳಿಯನ್ನು ಎಲ್ಲರೂ ಬೆಂಬಲಿಸಿದ್ದೇವೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಸರ್ಕಾರ ನೂರಕ್ಕೆ ನೂರರಷ್ಟು ಸೇನೆ ಕೈಗೊಂಡಿರುವ ಕ್ರಮವನ್ನು ಬೆಂಬಲಿಸುತ್ತದೆ ಎಂದು ಹೇಳಿದರು.

ಆಪರೇಷನ್ ಸಿಂಧೂರ ಹೆಸರಿನಲ್ಲಿ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಲಾಗಿದೆ. ಕೇವಲ ಉಗ್ರಗಾಮಿಗಳ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಲಾಗಿದೆ. ನಮ್ಮ ಸೈನಿಕರು ಉಗ್ರರ ನೆಲೆಗಳನ್ನು ಪತ್ತೆ ಹಚ್ಚಿ ದಾಳಿ ಮಾಡಿದ್ದು, ಅಮಾಯಕ ಜನರ ಸಾವು ನೋವು ತಪ್ಪಿಸಿದ್ದಾರೆ. ನಮ್ಮ ಸೈನಿಕರ ಕಾರ್ಯದಕ್ಷತೆಗೆ ದೊಡ್ಡ ಸಲಾಂ ಎಂದರು ಸಿದ್ದು.

ಈ ದಾಳಿಯನ್ನು ನಾವು ಸ್ವಾಗತಿಸುತ್ತೇವೆ.
ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ 26ಜನ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಸಾಕುವವರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟವಾಗಿದೆ,ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ. ರಾಜ್ಯದಲ್ಲಿ ಸುರಕ್ಷತೆಯ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಮುಖ್ಯ ಮಂತ್ರಿಗಳು ಸ್ಪಷ್ಟವಾಗಿ ಹೇಳಿದರು.

ಈ ಸೇನಾದಾಳಿ ನಡೆಸದೆ ಭಾರತದ ಮುಂದೆ ಬೇರೆ ಆಯ್ಕೆಗಳಿರಲಿಲ್ಲ,ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡ ನಡೆಸಿದ ಉಗ್ರಗಾಮಿಗಳು ಪಾಕಿಸ್ತಾನಕ್ಕೆ ಸೇರಿದವರೆಂದು ಜಗಜ್ಜಾಹೀರಾಗಿದ್ದರೂ. ಪಾಕಿಸ್ತಾನ ಇದನ್ನು ಒಪ್ಪಿಕೊಂಡು ಕ್ರಮಕೈಗೊಳ್ಳುವ ಭರವಸೆ ನೀಡದೆ ಹಠಮಾರಿ ಧೋರಣೆ ತಳೆದಿರುವ ಕಾರಣದಿಂದಾಗಿ ಭಾರತಕ್ಕೂ ಈ ದಾಳಿ ನಡೆಸದೆ ಬೇರೆ ಆಯ್ಕೆಗಳಿರಲಿಲ್ಲ ಎಂದು ಹೇಳಿದರು.

ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರೋದ್ದಾತ ಪರಾಕ್ರಮದಿಂದ ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸ್ವಲ್ಪ ಸಮಾಧಾನ ಸಿಕ್ಕಿರಬಹುದೆಂದು ಭಾವಿಸಿದ್ದೇನೆ ಎಂದು ಸಿಎಂ ನುಡಿದರು.

ಇದು ಪಾಕಿಸ್ಥಾನಕ್ಕೆ ಮಾತ್ರವಲ್ಲ ಭಾರತದ ಜೊತೆ ಈ ರೀತಿಯ ಕಿಡಿಗೇಡಿತನ ತೋರುವ ನೆರೆಯ ಎಲ್ಲ ದೇಶಗಳಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದರು.

ಇದು ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಅಷ್ಟೇ ಎಚ್ಚರದಿಂದ ಇರುವ ಕಾಲ,ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲಿಯೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ.
ಯಾರೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.