ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು: ಖರ್ಗೆ ಬೇಸರ

ನವದೆಹಲಿ: ಪಹಲ್ಗಾವ್ ನರಮೇಧಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಮಾಡಿ ಯಶಸ್ಸು ಪಡೆದ ಬೆನ್ನಲ್ಲೇ ಗುರುವಾರ ನಡೆದ ಸರ್ವಪಕ್ಷ ಸಭೆಗೆ ಪ್ರಧಾನಿಯವರೇ ಗೈರಾದುದಕ್ಕೆ ಎಐಸಿಸಿ‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರಗೊಂಡಿದ್ದಾರೆ.

ಕಾಶ್ಮೀರದ ಬೈಸರನ್‌ ಕಣಿವೆ ಪ್ರದೇಶದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.ಆಪರೇಷನ್‌ ಸಿಂಧೂರ ಹೆಸರಿನಡಿ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ 9 ಉಗ್ರ ತಾಣಗಳನ್ನ ಹೊಡೆದುರುಳಿಸಿದೆ.

ಭಾರತ ಸೇನಾ ಕಾರ್ಯಾಚರಣೆ ಯಶಸ್ಸಿನ ಬೆನ್ನಲ್ಲೇ ಇಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿತು.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ಆದರೆ ಪ್ರಮುಖವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ‌ ಪಾಲ್ಗೊಂಡಿರಲಿಲ್ಲ.ಇದಕ್ಕೆ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಭಾರತೀಯ ಸೇನೆ ನಡೆಸಿದ ವಾಯುದಾಳಿಯಲ್ಲಿ 100 ಉಗ್ರರ ಹತ್ಯೆಯಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ ಈ ಪರಿಸ್ಥಿತಿಯನ್ನು ಬೆಳೆಸಲು ನಾವು ಬಯಸುವುದಿಲ್ಲ. ಒಂದು ವೇಳೆ ಪಾಕಿಸ್ತಾನ ಕ್ಯಾತೆ ತೆಗೆದರೆ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಆಪರೇಷನ್‌ ಸಿಂಧೂರ ಕುರಿತು ನಡೆದ ಮಹತ್ವದ ಸರ್ವಪಕ್ಷ ಸಭೆಗೆ ಪ್ರಧಾನಿಯೇ ಗೈರಾದ ವಿಚಾರವನ್ನು ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿ, ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ಪಹಲ್ಗಾಮ್‌ ಉಗ್ರರ ದಾಳಿ ಬಳಿಕ ನಡೆದ ಸರ್ವಪಕ್ಷ ಸಭೆಗೂ ಮೋದಿ ಗೈರಾಗಿದ್ದನ್ನು ನೆನಪಿಸಿ ಬೇಸರ‌ ವ್ಯಕ್ತಪಡಿಸಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ. ಆದರೆ ಕೇಂದ್ರ ಸರ್ಕಾರ ನಾವು ಚರ್ಚಿಸಲು ಬಯಸದ ಕೆಲವು ವಿಷಯಗಳಿವೆ ಅಂತ ಹೇಳಿದ್ದಾರೆಂದು ತಿಳಿಸಿದರು.