ಸ್ಪಾನಲ್ಲಿ ವೇಶ್ಯಾವಾಟಿಕೆ;ಪೊಲೀಸರ ದಾಳಿ: 4 ಮಹಿಳೆಯರ ರಕ್ಷಣೆ

ಮೈಸೂರು: ಸ್ಪಾ ಹೆಸರಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಮಂಡ್ಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಮಹಿಳೆಯರನ್ನ ರಕ್ಷಿಸಿದ್ದಾರೆ.

ಸ್ಪಾ ನಡೆಸುತ್ತಿದ್ದ ಮಹಿಳೆ ಹಾಗೂ ಓರ್ವ ಪಿಂಪ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಬದಿ ಪ್ರತಿಷ್ಠಿತ ಕಾಲೇಜು ಪಕ್ಕದಲ್ಲೇ ಇಂತಹ ದಂಧೆ ನಡೆಯುತ್ತಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಸಲೂನ್ ಅಂಡ್ ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು.ಖಚಿತ ಮಾಹಿತಿ ಮೇರೆಗೆ ಕ್ಲೌಡ್ 11 ಹೆಸರಿನ ಯೂನಿಸೆಕ್ ಸಲೂನ್ ಅಂಡ್ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಈ ಹಿಂದೆಯೂ ಇದೇ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿದ್ದರು.ಆದರೂ ದಂದೆ ಮುಂದುವರಿದಿತ್ತು.
ಹಲವು ವರ್ಷಗಳಿಂದ ಇದೇ ದಂಧೆಯಲ್ಲಿ ತೊಡಗಿರುವ ಸಲೂನ್ ಮಾಲಕಿ ರಾಣಿ ಎಂಬಾಕೆ ವಿರುದ್ಧ ಈ ಹಿಂದೆ ಮೈಸೂರು, ಮಂಡ್ಯದಲ್ಲೂ ಪ್ರಕರಣ ದಾಖಲಾಗಿತ್ತು.

ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್, ಸಿಪಿಐ ನವೀನ್ ಸುಪ್ಪೇಕರ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಒಮ್ಮೆ ಸೀಜ್ ಆಗಿದ್ದರೂ ಮತ್ತೆ ದಂಧೆ ನಡೆಸಲು ಅವಕಾಶ ನೀಡಿದ್ದು ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಕಟ್ಟಡ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಒಡನಾಡಿ ಸಂಸ್ಥೆ ಆಗ್ರಹಿಸಿದೆ.
ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ದಂಧೆ ನಡೆಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ಕ್ರಮ ಕೈಗೊಳ್ಳಲಾಗಿದೆ.