ಮೈಸೂರು: ಹಿನಕಲ್ ಗ್ರಾಮ ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟಂತಹ ಗ್ರಾಮವಾಗಿದೆ,ಈ ಗ್ರಾಮವನ್ನು ಸಂಪೂರ್ಣ ಅಭಿವೃದ್ಧಿ ಮಾಡಲು ನಾನು ಸಿದ್ದ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು.
ಹಿನಕಲ್ ನಲ್ಲಿ 9 ಇಂದಿರಾ ಕ್ಯಾಂಟೀನ್ ಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ,ಮೊದಲ ಬಾರಿ ಮುಖ್ಯಮಂತ್ರಿಯಾಗಿ ಇಂದಿರಾ ಕ್ಯಾಂಟೀನ್ ಗಳನ್ನು ಬಡವರು, ಕೂಲಿ ಕಾರ್ಮಿಕರು, ಆಸ್ಪತ್ರೆಗಳಿಗೆ ಬರುವ ಜನರ ಹಸಿವನ್ನು ಕಡಿಮೆ ದರದಲ್ಲಿ ನೀಗಿಸುವ ಉದ್ದೇಶದಿಂದ ಆರಂಭಿಸಿದೆ ಎಂದು ಹೇಳಿದರು.
2017 ರಲ್ಲಿ ರಾಹುಲ್ ಗಾಂಧಿಯವರನ್ನು ಕರೆಸಿ ಇಂದಿರಾ ಕ್ಯಾಂಟೀನ್ ಆರಂಭಿಸಿದೆವು. ಆದರೆ ನಂತರದಲ್ಲಿ ಬಡವರ ಕ್ಯಾಂಟೀನ್ ಗಳು ಸೊರಗಿದವು. ಈಗ ನಾವೇ ಮತ್ತೆ ಅಧಿಕಾರಕ್ಕೆ ಬಂದು ಹಿನಕಲ್ ನಲ್ಲೇ ಇಂದಿರಾ ಕ್ಯಾಂಟೀನ್ ಗಳನ್ನು ಉದ್ಘಾಟಿಸಿರುವುದು ಮಾತ್ರವಲ್ಲದೆ, ಹೊಸದಾಗಿ ಇನ್ನೂ 184 ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ ಎಂದು ತಿಳಿಸಿದರು.
ಹಿನಕಲ್ ಗ್ರಾಮದ ಅಭಿವೃದ್ಧಿಗೆ ಅಗತ್ಯ ಇರುವ ಎಲ್ಲವನ್ನೂ ಹಂತ ಹಂತವಾಗಿ ಮಾಡಲಾಗುವುದು, ಎಂಜಿನಿಯರ್ ಗಳ ನೇಮಕಾತಿ, ಪಿಯುಸಿ ಕಾಲೇಜು ಸೇರಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನೂ ನೆರವೇರಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್.ಸಿ.ಮಹದೇವಪ್ಪ, ಪೌರಾಡಳಿತ ಸಚಿವರಾದ ರಹೀಂ ಖಾನ್, ಶಾಸಕರಾದ ಜಿ.ಟಿ.ದೇವೆಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಯತ್ರೀಂದ್ರ ಸಿದ್ದರಾಮಯ್ಯ, ಡಿ.ತಿಮ್ಮಯ್ಯ , ಜಿಲ್ಲಾಧಿಕಾರಿ ಜಿ ಲಕ್ಷ್ಮೀ ಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.