ಗಣೇಶ ಭಕ್ತರ ತಂಟೆಗೆ ಬರುವ ಪೊಲೀಸರ ಗ್ರಹಚಾರ ನಾವು ಬಿಡಿಸುತ್ತೇವೆ:ಅಶೋಕ

ಬೆಂಗಳೂರು: ರಾಜ್ಯದಲ್ಲಿ ಗಣೇಶನ ಭಕ್ತರ ತಂಟೆಗೆ ಬರುವ ಪೊಲೀಸರ ಗ್ರಹಚಾರವನ್ನು ನಾವು ಬಿಡಿಸುತ್ತೇವೆ. ಸದಾ ಹಿಂದೂ ಎಂದು ಹೇಳುವ ಡಿ.ಕೆ.ಶಿವಕುಮಾರ್‌, ಈಗ ಭಕ್ತರಿಗೆ ಬೆದರಿಕೆ ಹಾಕಿದ ಪೊಲೀಸ್‌ ಅಧಿಕಾರಿಯ ವಿರುದ್ಧ ಕ್ರಮ ವಹಿಸಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಮ್ಮದಿಯಿಂದ ಗಣೇಶೋತ್ಸವ ಆಚರಿಸಲು ಕೂಡ ಕಾಂಗ್ರೆಸ್‌ ಅವಕಾಶ ನೀಡುತ್ತಿಲ್ಲ. ಬಾಲ ಗಂಗಾಧರ ತಿಲಕ್‌ ಅವರು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಈ ಆಚರಣೆಯನ್ನು ತಂದರು. ಕೇವಲ ಕರ್ನಾಟಕ ಮಾತ್ರವಲ್ಲದೆ, ಜಗತ್ತಿನಾದ್ಯಂತ ಆಚರಣೆ ನಡೆಯುತ್ತಿದೆ. ಆದರೆ ಟಿ.ನರಸೀಪುರದಲ್ಲಿ ಒಬ್ಬ ಅಹಂಕಾರಿ ಪೊಲೀಸ್‌ ಅಧಿಕಾರಿ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ. ಮಸೀದಿ ಮುಂದೆ ಹೋಗಬಾರದು, ಗ್ರಹಚಾರ ಬಿಡಿಸುತ್ತೇನೆ ಎಂದು ಹೇಳಿದ್ದಾರೆ. ಗಣೇಶೋತ್ಸವ ಆಚರಣೆ ಮಾಡುವವರು ರೌಡಿಗಳಲ್ಲ. ಇವರಿಗೆ ಧಮ್‌ ಇದ್ದರೆ ಮಸೀದಿಯಿಂದ ಕಲ್ಲು ಹೊಡೆಯುವವರಿಗೆ, ಬಾಂಬ್‌ ಹಾಕುವವರಿಗೆ ಬೆದರಿಕೆ ಹಾಕಬೇಕಿತ್ತು. ಇಂತಹ ದುರಂಹಕಾರಿ ಪೊಲೀಸ್‌ ಅಧಿಕಾರಿಯನ್ನು ಇಟ್ಟುಕೊಂಡಿರುವ ಇಲಾಖೆಗೆ ನಾಚಿಕೆಯಾಗಬೇಕು ಎಂದು ಅಶೋಕ ಟೀಕಿಸಿದರು.

ನಾವು ಪಾಕಿಸ್ತಾನದಲ್ಲಿಲ್ಲ. ಗಣೇಶ ಮೊದಲು ಬಂದನೋ, ಮಸೀದಿ ಮೊದಲು ಬಂತೋ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಬೇಕು. ಗಣೇಶನ ಪ್ರತಿಷ್ಠಾಪನೆ ಮಾಡಲು ಗ್ರಾಮ ಪಂಚಾಯಿತಿ, ಪಾಲಿಕೆ, ಜಿಲ್ಲಾಧಿಕಾರಿ ಮೊದಲಾದ ಕಡೆ ಅಲೆಯಬೇಕು. ಮಸೀದಿ ಮುಂದೆ ಹೋದಾಗ ಮಾತ್ರ ಗಲಾಟೆಯಾಗುತ್ತದೆ. ಆದರೆ ಚರ್ಚ್‌ ಮುಂದೆ ಹೋದಾಗ, ಜೈನರ ಮಂದಿರ, ಸಿಖ್ಖರ ದೇವಾಲಯಗಳ ಮುಂದೆ ಮೆರವಣಿಗೆ ಹೋದಾಗ ಗಲಾಟೆಯಾಗುವುದಿಲ್ಲ. ಇಷ್ಟು ನಿರ್ದಿಷ್ಟ ರಸ್ತೆಗಳನ್ನು ಮುಸ್ಲಿಮರಿಗೆ ಬರೆದುಕೊಟ್ಟಿದ್ದೇವೆ ಎಂದು ತಿಳಿಸಲಿ. ಇಲ್ಲಿ ಭಾರತದ ಸಂವಿಧಾನ ಇದೆಯೇ ಹೊರತು, ಪಾಕಿಸ್ತಾನದ ಸಂವಿಧಾನವಲ್ಲ. ಮುಸ್ಲಿಮರು ಉರುಸ್‌ ಮಾಡುವಾಗ ದೇವಾಲಯಗಳ ಮುಂದೆಯೇ ಮೆರವಣಿಗೆ ಹೋಗುತ್ತಾರೆ. ಆದರೆ ಹಿಂದೂಗಳು ಎಂದಿಗೂ ದೇವಾಲಯದಲ್ಲಿ ಕುಳಿತು ಕಲ್ಲು ಹೊಡೆಯುವುದಿಲ್ಲ. ಇಲ್ಲಿ ತಾಲಿಬಾನ್‌ ಆಡಳಿತ ನಡೆಯುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

ಒಬ್ಬ ಪೊಲೀಸ್‌ ಗಣೇಶ ಭಕ್ತರನ್ನು ಕರೆದು ಬೆದರಿಕೆ ಹಾಕುತ್ತಾನೆ ಎಂದರೆ, ಅದಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಬೆಂಬಲವಿದೆ ಎಂದೇ ಅರ್ಥ. ಹಿಂದೂಗಳು ತಮ್ಮದೇ ದೇಶದಲ್ಲಿ ಸ್ವತಂತ್ರವಾಗಿ ಆಚರಣೆ ಮಾಡಲು ಆಗುತ್ತಿಲ್ಲ. ಸಿಎಂ ಡಿ.ಕೆ.ಶಿವಕುಮಾರ್‌ ಎಲ್ಲ ಕಡೆ ಓಡಾಡಿ ನಾಮ ಎಳೆದುಕೊಳ್ಳುತ್ತಾರೆ. ಆದರೆ ಹಿಂದೂಗಳಿಗೆ ಬೆಂಬಲ ನೀಡಲ್ಲ. ಬಾಂಗ್ಲಾ ನಿವಾಸಿಗಳು, ಬಾಂಬ್‌ ಹಾಕುವ ಉಗ್ರರನ್ನು ಪೊಲೀಸರು ಸೆರೆಹಿಡಿಯಬೇಕು. ಅದನ್ನು ಬಿಟ್ಟು ಭಕ್ತರಿಗೆ ಧಮಕಿ ಹಾಕಬಾರದು ಎಂದು ತಾಕೀತು ಮಾಡಿದರು.

ಪೊಲೀಸರು ಭಕ್ತರಿಗೆ ಕಿರುಕುಳ ಕೊಡಲು ಮುಂದಾದರೆ ಅವರ ಗ್ರಹಚಾರವನ್ನು ನಾವು ಬಿಡಿಸುತ್ತೇವೆ ಎಂದು ಎಚ್ಚರಿಸಿದರು. ಮಸೀದಿಗಳಲ್ಲಿ ಮೈಕ್‌ ಬಳಸುತ್ತಾರೆ. ಧ್ಬನಿವರ್ಧಕಗಳ ಬಳಕೆ ಬಗ್ಗೆ ಕೋರ್ಟ್‌ ಆದೇಶವಿದೆ. ಅದನ್ನು ಸರ್ಕಾರ ಪಾಲಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ದಲಿತ ವಿರೋಧಿ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದರು. ಕೆ.ಎನ್‌.ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದಾಗಲೇ ಯಾರು ದಲಿತ ವಿರೋಧಿ ಎಂದು ಅರ್ಥವಾಗಬೇಕಿತ್ತು. ಈಗ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಕಾಂಗ್ರೆಸ್‌ನವರೇ ದಲಿತ ವಿರೋಧಿ ಎಂದು ಅರಿವಾಗಿದೆ ಎಂದು ಅಶೋಕ್ ಛೇಡಿಸಿದರು.