ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಟೀಕೆ

ಮದ್ದೂರು: ಪೆನ್ನು ಪೇಪರ್ ನಾಯಕರೇ ನಿಮ್ಮದು ಏನೇ ರಾಜಕಾರಣ ಇದ್ದರೂ ಅದು ನಿಮ್ಮ ಚೌಕಟ್ಟಿಗೆ ಮಾತ್ರ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮದ್ದೂರು ವಿಧಾನಸಭಾ ಕ್ಷೇತ್ರದ ಶಾಂತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆವರೆಗೂ ಗೃಹಲಕ್ಷ್ಮಿ ಹಣ ಹಾಕಲ್ಲ, ಯಾವುದಾದರು ಉಪಚುನಾವಣೆ, ಸಂಸತ್ ಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬರೋವರೆಗೂ ಹಣ ಹಾಕಲ್ಲ ಎಂದು ನಿಖಿಲ್ ವ್ಯಂಗ್ಯ ವಾಡಿ ದರು.

ಸರ್ಕಾರದ ಗ್ಯಾರಂಟಿಗಳನ್ನ ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸುತ್ತಿಲ್ಲ ಪ್ರತಿ ತಿಂಗಳು ಗ್ಯಾರಂಟಿ ಹಣ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಿದ್ರು ಆದರೆ ಮಾತು ತಪ್ಪಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೂರು ಉಪ ಚುನಾವಣೆ ಸಂದರ್ಭದಲ್ಲಿ ಮೂರು ಕ್ಷೇತ್ರಗಳಿಗೆ ಮಾತ್ರ ಒಂದೇ ಸಲ ನಾಲ್ಕು ತಿಂಗಳು ಹಣ ಜಮೆ ಅಯ್ತು.ಮತ್ತೆ ಹಣಕ್ಕೆ ತಾ.ಪಂ ಹಾಗೂ ಜಿ.ಪಂ ಚುನಾವಣೆ ಬರೋವರೆಗೂ ಜನ ಕಾಯಬೇಕು ಎಂದು ಟೀಕಿಸಿದರು.

ರಾಮನಗರದಲ್ಲಿ ಪೆನ್ನು ಪೇಪರ್ ನಾಯಕರು ಜಿಲ್ಲೆಯಲ್ಲಿ ಫಲಾನುಭವಿಗಳ ಸಭೆ ಮಾಡಿ ಅಲ್ಲಿ ಕ್ಷೇತ್ರದ ಹೆಣ್ಣು ಮಕ್ಕಳಿಗೆ ನನ್ನ ತಮ್ಮನಿಗೆ ಮತ ಹಾಕಿಲ್ಲ ಅಂದ್ರೆ ನಮ್ಮ ಎಲ್ಲ ಕಾರ್ಯಕ್ರಮಗಳನ್ನ ನಿಲ್ಲುಸುತ್ತೇವೆ ಎಂದು ಧಮ್ಕಿ ಹಾಕಿದ್ದರು,ಈಗ ಸೋತು ಮನೆಯಲ್ಲಿ ಕೂತಿದ್ದಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ನಿಖಿಲ್ ವಾಗ್ದಾಳಿ ನಡೆಸಿದರು.

ಮಳವಳ್ಳಿ ಮೀಸಲು ವಿಧಾನಸಭಾ ಕ್ಷೇತ್ರ. ಇಲ್ಲಿ ಎಲ್ಲಾ ಸಮುದಾಯದವರು ಇದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಹೆಚ್ಚು ಇರುವಂತಹ ಕ್ಷೇತ್ರ. ಮುಂದಿನ ಚುನಾವಣೆಯಲ್ಲಿ ಅನ್ನದಾನಿ ಅವರನ್ನ ಶಾಸಕರಾಗಿ ಮಾಡುವುದಕ್ಕೆ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ನಾಯಕರು ಸೋತಿರಬಹುದು ಸತ್ತಿಲ್ಲ. ಅನ್ನದಾನಿಯವರು ಸೋತಿರಬಹುದು ಆದರೆ ಮನೆ ಸೇರಿಕೊಂಡಿಲ್ಲ. ಮುಂದಿನ ಚುನಾವಣೆಯಲ್ಲಿ ತೋರಿಸುತ್ತೇವೆ ನಮ್ಮ ಶಕ್ತಿಯನ್ನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ತಲೆಬಾಗಲೇಬೇಕು. ಗೆಲುವು ಸೋಲು ಸರ್ವೇ ಸಾಮಾನ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ಕೆ ಅನ್ನದಾನಿ, ಸುರೇಶ್ ಗೌಡ,ರಾಜ್ಯದ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯರಾಮಣ್ಣ, ಬಿ. ಆರ್ ರಾಮಚಂದ್ರು, ಜಿಲ್ಲಾಧ್ಯಕ್ಷ ಡಿ. ರಮೇಶ್, ವಿಶ್ವನಾಥ್, ರವಿ ಕಂಸಾಗರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.