ಕಾಂಗ್ರೆಸ್ ನಲ್ಲಿ ಕೆಲ ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ:ನಿಖಿಲ್ ಟಾಂಗ್

ಬೀದರ್: ಕಾಂಗ್ರೆಸ್ ನಲ್ಲಿ ಕೆಲವು ಗುಂಪು ನೇರ, ಇನ್ನು ಕೆಲವು ಗುಂಪುಗಳು ಸೈಲೆಂಟಾಗಿ ಕೆಲಸ ಮಾಡುತ್ತಿವೆ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಬೇರೆಯವರಂತೆ ಸರ್ಕಾರ ಪತನ ಆಗುತ್ತದೆ ಅಂತ ನಾನು ಹೇಳುವುದಿಲ್ಲ,ಆದರೆ ಕಾಂಗ್ರೆಸ್‌ ಪಕ್ಷದಲ್ಲಿ ಹಲವು ಗುಂಪುಗಳಿವೆ ಎಂದು ಹೇಳಿದರು.

ಬೀದರ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ,ಸಿಎಂ ಖುರ್ಚಿಗಾಗಿ ಕಾಂಗ್ರೆಸ್‌ ನಲ್ಲಿ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಅದೇನೋ ಕ್ರಾಂತಿ ಆಗುತ್ತೆ ಅಂತ ಹೇಳ್ತಿದ್ದಾರೆ ನೋಡೋಣ ಎಂದು ಮಾರ್ಮಿಕವಾಗಿ ನುಡಿದರು.

ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡದೆ ಎರಡೂವರೆ ವರ್ಷ ಕಾಲಹರಣ ಮಾಡಿದ್ದಾರೆ. ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎಂದು ಖುದ್ದು ಅವರ ಪಕ್ಷದ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ರಾಜ್ಯಕ್ಕೆ ದೊಡ್ಡ ಗಾತ್ರದ ಬಜೆಟ್ ಕೊಟ್ಟಿದ್ದೀನಿ ಎಂದು ಸಿಎಂ ಬೆನ್ನು ತಟ್ಟುಕೊಳ್ಳುತ್ತಾರೆ ಅದರಲ್ಲಿ ಸಾಲ ಎಷ್ಟಾಗಿದೆ ಎಂಬುದನ್ನ ಜನರಿಗೆ ಹೇಳಲಿ ಎಂದು ನಿಖಿಲ್ ಸವಾಲು ಹಾಕಿದರು.

2028ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಸೀಟು ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ,ಇದರಲ್ಲಿ ಯಾವುದೇ ಗೊಂದಲ ಇಲ್ಲ, ಸಂಸತ್ ಚುನಾವಣೆಯಲ್ಲಿ ಕೈ ಜೋಡಿಸಿದ್ದೇವೆ. ಅದನ್ನ ರಾಜ್ಯದ ಜನ ನೋಡಿದ್ದಾರೆ, ಅದರಲ್ಲಿ ಮುಚ್ಚು ಮರೆ ಇಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಜೀ ಅವರ ನಾಯಕತ್ವದಲ್ಲಿ ನಮ್ಮ ದೇಶ ಆರ್ಥಿಕವಾಗಿ ಮೂರನೇ ದೊಡ್ಡ ದೇಶವಾಗಿದೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಪುನರುಚ್ಛರಿಸಿದರು.