ಮೂವರು ಶಂಕಿತರ ಬಂಧಿಸಿದ ಎನ್ ಐ ಎ

ಬೆಂಗಳೂರು: ಪ್ರಮುಖ ಬೆಳವಣಿಗೆ
ಯೊಂದರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ 2023 ರ ಲಷ್ಕರ್-ಎ-ತೈಬಾ ಗುಂಪಿನ ಜೈಲು ಮೂಲಭೂತೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಮನೋವೈದ್ಯ ಮತ್ತು ಕರ್ನಾಟಕದ ಪೊಲೀಸ್ ಸೇರಿದಂತೆ ಮೂವರು ಶಂಕಿತರನ್ನು ಬಂಧಿಸಿದೆ.

ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳಲ್ಲಿ ಎನ್ ಐ ಎ ತನಿಖಾಧಿಕಾರಿಗಳು ಶೋಧ ನಡೆಸಿ ನಂತರ ಶಂಕಿತರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್; ನಗರ ಸಶಸ್ತ್ರ ಮೀಸಲು ಸಹಾಯಕ ಸಬ್-ಇನ್ಸ್‌ಪೆಕ್ಟರ್ ಚಾಂದ್ ಪಾಷಾ; ಮತ್ತು ಪರಾರಿಯಾಗಿರುವ ಆರೋಪಿಯ ತಾಯಿ ಅನೀಸ್ ಫಾತಿಮಾ ಬಂಧಿತ ಶಂಕಿತರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಧನೆ ವೇಳೆ ವಿವಿಧ ಡಿಜಿಟಲ್ ಸಾಧನಗಳು,ನಗದು, ಚಿನ್ನ ಮತ್ತಿತರ ವಸ್ತುಗಳನ್ನು
ಬಂಧಿತ ಆರೋಪಿಗಳು ಮತ್ತು ಇತರ ಶಂಕಿತರ ಮನೆಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎನ್ ಐ ಎ ತಿಳಿಸಿದೆ.

ಈ ಪಿತೂರಿಯ ಭಾಗವಾಗಿ, ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದನಾ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಸೀರ್ ಅಲಿಯಾಸ್ ಟಿ ನಸೀರ್ ಸೇರಿದಂತೆ ಜೈಲು ಕೈದಿಗಳ ಬಳಕೆಗಾಗಿ ಡಾ. ನಾಗರಾಜ್ ಮೊಬೈಲ್ ಫೋನ್‌ಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಗೊತ್ತಾಗಿದೆ.

ಈ ಚಟುವಟಿಕೆಯಲ್ಲಿ ನಾಗರಾಜ್‌ಗೆ ಪವಿತ್ರಾ ಎಂಬಾಕೆ ಬೆಂಬಲ ನೀಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಾಜ್ ಮತ್ತು ಪವಿತ್ರಾ ಅವರ ಮನೆಗಳ ಜೊತೆಗೆ, ಪರಾರಿಯಾಗಿರುವ ಜುನೈದ್ ಅಹ್ಮದ್ ನ ತಾಯಿ ಅನೀಸ್ ಫಾತಿಮಾ ಅವರ ಮನೆಯನ್ನು ಸಹ ಶೋಧಿಸಲಾಗಿದೆ.