ಜಮ್ಮು: ಭಾರೀ ಮಳೆಯಿಂದ ಜಮ್ಮು- ಕಾಶ್ಮೀರದ ಅಮರನಾಥ ಯಾತ್ರೆಗೆ ತೆರಳುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು ಅಮರನಾಥ ಯಾತ್ರೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಗಂಡೇರ್ಬಾಲ್ ಜಿಲ್ಲೆಯ ಬಾಲ್ಟಾಲ್ ಯಾತ್ರೆಯ ಬಾಲ್ಟಾಲ್ ಮಾರ್ಗದಲ್ಲಿ ನೀರಿನ ಜೊತೆ ಕಲ್ಲು ಬಂಡೆಗಳು ಉರುಳಿ ಬಂದಿದ್ದರಿಂದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.
ಬಾಲ್ಟಾಲ್ ಮಾರ್ಗದಲ್ಲಿ ಭೂಕುಸಿತವಾದ ಕೂಡಲೇ ಭೀತರಾದ ಜನರು, ಅಪಾಯದಿಂದ ತಪ್ಪಿಸಿಕೊಳ್ಳಲು ಅತ್ತಿತ್ತ ಓಡಲು ಹೆಣಗಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ವೀಡಿಯೋದಲ್ಲಿ ಇಬ್ಬರು ಯಾತ್ರಿಗಳು ಸಿಲುಕಿರುವುದು ಸೆರೆಯಾಗಿದೆ. ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅಪಾಯದಿಂದ ತಪ್ಪಿಸಿಕೊಳ್ಳಲು ಅನೇಕ ಜನರು ಮಾರ್ಗದಲ್ಲಿ ಅಳವಡಿಸಲಾದ ರೇಲಿಂಗ್‌ಗಳನ್ನು ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಾಣುತ್ತದೆ.
ಸ್ಥಳದಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಯಾತ್ರಿಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಈ ಮಾರ್ಗಗಳ ದುರಸ್ಥಿ ಕಾರ್ಯ ಮುಗಿಯುವ ವರೆಗೂ ಯಾತ್ರೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷ ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರನಾಥನ ದರ್ಶನ ಪಡೆದಿದ್ದಾರೆ.