ಫಾರ್ಮಸಿಸ್ಟ್ ಗಳು ವೈದ್ಯರಷ್ಟೇ ಪ್ರಮುಖರು-ಸಿದ್ದರಾಮಯ್ಯ

ಬೆಂಗಳೂರು: ಫಾರ್ಮಸಿಸ್ಟ್ ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು,ತಮ್ಮ ವೃತ್ತಿಯಲ್ಲಿ ಶ್ರೀಮಂತ ಬಡವ, ಜಾತಿ,ಧರ್ಮಗಳೆಂದು ಬೇಧ ಮಾಡದೇ ಎಲ್ಲರಿಗೂ ಸಮಾನಾಗಿ ಚಿಕಿತ್ಸೆ ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಕಾಲೇಜಿನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಫಾರ್ಮಸಿಸ್ಟ್ ಗಳು ವೈದ್ಯರಷ್ಟೇ ಪ್ರಮುಖರಾಗಿದ್ದು, ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾರೆ. ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಮಾಲೀಕರಾದ ಡಾ.ಕೆ.ವೆಂಟಕಗಿರಿಯವರ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇಲ್ಲಿ ಫಾರ್ಮಸಿಸ್ಟ್ ಶಿಕ್ಷಣ ಪಡೆದು ದೇಶವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾಜದಲ್ಲಿನ ಬಡರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಬೇಕು, ಖಾಸಗಿ ಚಿಕಿತ್ಸಾ ವೆಚ್ಚಗಳನ್ನು ಭರಿಸಲು ಅಶಕ್ತರಾಗಿರುವ ಬಡರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಸರ್ಕಾರದ ಈ ಆಶಯದೊಂದಿಗೆ ಫಾರ್ಮಸಿಸ್ಟ್ ಗಳೂ ಕೈಜೋಡಿಸಿ, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾರ್ಥಕ ಸೇವೆ ಸಲ್ಲಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.