ಮೈಸೂರು: ಪೆರೋಲ್ ರಜೆ ಮೇಲೆ ಜೈಲಿನಿಂದ ಹೋಗಿದ್ದ ಸಜಾ ಖೈದಿ ನಾಪತ್ತೆಯಾದ ಘಟನೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.
ಸಜಾ ಖೈದಿಯನ್ನ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕಾರಾಗೃಹದ ಅಧೀಕ್ಷಕರಾದ ಮೋಹನ್ ಕುಮಾರ್ ಅವರು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿವಿದ ಪ್ರಕರಣಗಳಲ್ಲಿ ಸಜಾ ಖೈದಿಯಾಗಿರುವ ಪ್ರಸಾದ್ @ಗೂಂಡಾ ನಾಪತ್ತೆಯಾಗಿದ್ದಾನೆ.
ಬೆಂಗಳೂರು ನ್ಯಾಯಾಲಯ ಹಾಗೂ ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳಲ್ಲಿ ಪ್ರಸಾದ್ ಸಜಾ ಖೈದಿಯಾಗಿದ್ದಾನೆ.
ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಯನ್ನೂ ಅನುಭವಿಸುತ್ತಿದ್ದಾನೆ.ಈತನನ್ನ ಹಾಸನ ಕಾರಾಗೃಹದಿಂದ ಮೈಸೂರು ಕೇಂದ್ರ ಕಾರಾಗೃಹಕ್ಕೆ 21-07-2024 ರಂದು ರವಾನಿಸಲಾಗಿತ್ತು.
ಹೈ ಕೋರ್ಟ್ ಆದೇಶದಂತೆ ಪ್ರಸಾದ್ ನನ್ನು ಪೆರೋಲ್ ನಲ್ಲಿ ಬಿಡುಗಡೆ ಮಾಡಿ, 19-09-2025 ರಿಂದ 18-10-2025 ರ ವರೆಗೆ ಒಂದು ತಿಂಗಳ ಪೆರೋಲ್ ರಜೆ ನೀಡಲಾಗಿತ್ತು.
18-10-2025 ರಂದು ಪ್ರಸಾದ್ ವಾಪಸ್ ಬಂದಿಲ್ಲ. ಹಾಗಾಗಿ ಈತನ ವಿರುದ್ದ ಹಾಗೂ ಜಾಮೀನು ನೀಡಿದ ತಂದೆ ಪ್ರಕಾಶ್ ಹಾಗೂ ರಂಜಿತ್ ಕುಮಾರ್ ವಿರುದ್ದ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

