ಕಾಂಗ್ರೆಸ್‌ನಲ್ಲಿನ ಪವರ್‌ ಶೇರಿಂಗ್‌ ಚರ್ಚೆಯಿಂದ‌ ಅಭಿವೃದ್ಧಿ ಶೂನ್ಯ: ವಿಶ್ವನಾಥ್

ಮೈಸೂರು: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಕುಂಠಿತಗೊಂಡಿವೆ. ಇದಕ್ಕೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಪವರ್‌ ಶೇರಿಂಗ್‌ ಚರ್ಚೆಯೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್‌ ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನ ಬೆಳಗಾದರೆ ಸಾಕು ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯ ಪ್ರವೇಶಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ನಿಂದ ಸಿದ್ದರಾಮಯ್ಯ ಅವರನ್ನು ಹೊರಹಾಕಿದಾಗ ಆಶ್ರಯ ಕೊಟ್ಟಿದ್ದು ಕಾಂಗ್ರೆಸ ಪಕ್ಷ. ಆದರೆ ಈಗ ಸಿದ್ದರಾಮಯ್ಯ ಕಾಂಗ್ರೆಸ್‌ ಪಾರ್ಟಿಯನ್ನೇ ಮುಗಿಸಲು ಮುಂದಾಗಿದ್ದಾರೆ ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಅಧಿಕಾರ ಹಂಚಿಕೆ ವಿಚಾರದಲ್ಲಿ ಎಐಸಿಸಿ ಅಧ್ಯಕ್ಷರ ಸಮಕ್ಷಮದಲ್ಲಿ ಆಣೆ ಪ್ರಮಾಣ ಮಾಡಿದ್ದಾರೆ. ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಡಿ.ಕೆ.ಸುರೇಶ್‌ ಸಹೋದರರ ಸಮ್ಮುಖದಲ್ಲಿ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು ಉಪಸ್ಥಿತರಿದ್ದರು. ಆದರೆ ಈ ಬಗ್ಗೆ ಯಾರೊಬ್ಬರೂ ಈಗ ಬಾಯಿ ಬಿಡುತ್ತಿಲ್ಲ ಎಂದು ಹೇಳಿದರು.

ಡಿಕೆಶಿಗೆ ಅಧಿಕಾರ ಹಸ್ತಾಂತರ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಾರ್ಟಿ ಧೂಳಿಪಟವಾಗಲಿದೆ ಎಂದು ವಿಶ್ವನಾಥ್ ಎಚ್ಚರಿಸಿದರು.