ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರನ್ನು
ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿ ಮೈಸೂರಿನ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಚರ್ಚಿಸಿದರು.
ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾತನಾಡಿದ ಯದುವೀರ್ ಒಡೆಯರ್,
ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ ಮೈಸೂರಿನಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.
ಈ ಎರಡೂ ಯೋಜನೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮ ಅನುಷ್ಠಾನಕ್ಕೆ ತರಲಿದೆ ಎಂದು ಹೇಳಿದರು
ಮೈಸೂರಿನಲ್ಲಿ ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 18.47 ಕೋಟಿ ರೂ. ಹಾಗೂ ಮೈಸೂರಿನ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 271.60 ಲಕ್ಷ ರೂಪಾಯಿ ಅನುಮೋದನೆ ನೀಡಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.
ಈ ಯೋಜನೆಗೆ ಅಂತಿಮ ಅನುಮೋದನೆ ದೊರಕಿರುವುದು ಸಂತಸ ತಂದಿದೆ, ಈ ಯೋಜನೆಗಳಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತಷ್ಟು ವೃದ್ಧಿಯಾಗಲಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿ ಪೂಜೆ ನಡೆಸಲು ಶೀಘ್ರ ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಗಜೆಂದ್ರ ಸಿಂಗ್ ಶೇಖಾವತ್ ಅವರು ಯೋಜನೆಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಮೈಸೂರಿನ ಇನ್ನೂ ಕೆಲವು ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.
ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಎಲ್ಲ ರೀತಿಯಿಂದಲೂ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸಹಕಾರ ನೀಡಲಿದೆ. ಈ ಸಂಬಂಧ ನಾನು ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉನ್ನತಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಯದುವೀರ್ ಒಡೆಯರ್ ಭರವಸೆ ನೀಡಿದರು

