ನವದೆಹಲಿ: ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ ಎಂದು ಮುಖ್ಯ ಮಂತ್ರಿ ಸುದ್ದರಾಮಯ್ಯ ಹೇಳಿದರು.
ದೆಹಲಿಯಲ್ಲಿ ಮತಗಳ್ಳತನದ ಬಗ್ಗೆ ನಡೆದ ಲಿಯಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ,
ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಅತ್ಯಂತ ಪವಿತ್ರ ಹಕ್ಕು ಮತದಾನದ ಹಕ್ಕನ್ನು ರಕ್ಷಿಸಲು ಬಂದಿದ್ದೇವೆ ಎಂದು ತಿಳಿಸಿದರು.
ಒಬ್ಬ ರೈತ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸಲು, ಒಬ್ಬ ಕಾರ್ಮಿಕ ತನ್ನ ಘನತೆಯನ್ನು ಕಾಯ್ದುಕೊಳ್ಳಲು, ಒಬ್ಬ ಯುವಕ ತನ್ನ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಒಂದು ರಾಷ್ಟ್ರ ತನ್ನ ಸಾಮೂಹಿಕ ಇಚ್ಛೆಯನ್ನು ಘೋಷಿಸಲು ಇರುವ ಸಾಧನವೇ ಮತದಾನ ಎಂದು ಬಣ್ಣಿಸಿದರು.
ಇಂದು ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ದುರುಪಯೋಗ ಸೇರಿದಂತೆ ವಿವಿಧ ಮತಗಳ್ಳತನ ವಿಧಾನಗಳ ಮೂಲಕ ಈ ಪವಿತ್ರ ಶಕ್ತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಒಂದು ಬಾರಿಯಲ್ಲ, ಎರಡಲ್ಲ, ಪದೇ ಪದೇ ಕದಿಯಲಾಗುತ್ತಿದೆ. ಅದಕ್ಕಾಗಿ ಭಾರತದ ಜನತೆ ಇಲ್ಲಿಗೆ ಬಂದು ಸಾಕು, ಮತಳ್ಳತನವನ್ನು ನಿಲ್ಲಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಹೇಳುತ್ತಿದ್ದಾರೆ.ಇತಿಹಾಸ ನಮಗೆ ಕಲಿಸಿದ ಪಾಠವೆಂದರೆ, ಸರ್ವಾಧಿಕಾರವು ಬೀದಿಗಳಲ್ಲಿ ಬಂದೂಕುಗಳಿಂದ ಪ್ರಾರಂಭವಾಗುವುದಿಲ್ಲ. ಅದು ಸಂಸ್ಥೆಗಳ ದುರ್ಬಳಕೆ ಹಾಗೂ ನಿಧಾನವಾಗಿ ವ್ಯವಸ್ಥೆಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಚುವ ಮತ್ತು ಅಂತಿಮವಾಗಿ, ಚುನಾವಣೆಗಳ ಕಳ್ಳತನದಿಂದ ಪ್ರಾರಂಭವಾಗುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ರಕ್ಷಿಸುವಂತೆ ನಟಿಸುತ್ತಲೇ, ಅದನ್ನು ಬುಡಮೇಲು ಮಾಡುವುದನ್ನೇ ಪ್ರಪಂಚದಾದ್ಯಂತದ ಸರ್ವಾಧಿಕಾರಿ ಆಡಳಿತಗಳು ಮೂಲ ತಂತ್ರವನ್ನಾಗಿಸಿದೆ ಇಂದು ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಸಿಎಂ ಹೇಳಿದರು.
ಕದ್ದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರವು ಪ್ರಜಾಸತ್ತಾತ್ಮಕ ಸರ್ಕಾರವಲ್ಲ ಎಂಬುದು ಸುಸ್ಪಷ್ಟ. ಅದು ಜನರನ್ನು ಹೆದರಿಸುವ, ಜನಾದೇಶವನ್ನು ತಿರುಚುವ, ಮತ್ತು ವಂಚನೆಯ ಮೂಲಕ ಮಾತ್ರ ಬದುಕುಳಿಯುವ ಸರ್ಕಾರ. ಇದು, ಪ್ರಜಾಪ್ರಭುತ್ವಗಳು ಚುನಾವಣಾ ದೌರ್ಜನ್ಯಗಳ ಮಟ್ಟಕ್ಕೆ ಇಳಿಯುವ ರೀತಿಯಾಗಿದೆ. ಇಂದು ಬಿಜೆಪಿಯ ‘ಮತಗಳ್ಳತನ’ವು ಸ್ವಾತಂತ್ರ್ಯಾನಂತರದ ನಮ್ಮ ಗಣರಾಜ್ಯಕ್ಕೆ ಎದುರಾದ ಅತಿದೊಡ್ಡ ಬೆದರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂತಹ ಕ್ಲಿಷ್ಟಕರ ಸಮಯದಲ್ಲಿ , ಅಸಾಧಾರಣ ಧೈರ್ಯದಿಂದ ನಿಂತಿರುವ ಏಕೈಕ ನಾಯಕ ರಾಹುಲ್ ಗಾಂಧಿಯವರು. ರಾಹುಲ್ ಗಾಂಧಿಯವರು ಹೊಂದಿಕೆಯಾಗದ ಮತದಾರರ ಪಟ್ಟಿಗಳನ್ನು, ಬೂತ್ ಮಟ್ಟದಲ್ಲಿ ತಿರುಚಿದ ಅಂಶಗಳನ್ನು ಮತ್ತು ವ್ಯವಸ್ಥಿತ, ಸಂಘಟಿತ ಮತಗಳ್ಳತನ’ವನ್ನು ತನಿಖೆಯ ಮೂಲಕ ಬಯಲು ಮಾಡಿದರು ಎಂದು ಸಿದ್ದು ಹೇಳಿದರು.
ಕರ್ನಾಟಕದ ಮಹದೇವಪುರ ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ, ‘ವೋಟ್ ಚೋರಿ’ ಕೇವಲ ಆರೋಪವಾಗಿರದೇ, ಜೀವಂತ ವಾಸ್ತವ ಎಂದು ರಾಹುಲ್ ಗಾಂಧಿಯವರು ಗಂಭೀರ ಅಕ್ರಮಗಳನ್ನು ಉದಾಹರಣೆಗಳಾಗಿ ಎತ್ತಿ ತೋರಿಸಿದ್ದಾರೆ ಎಂದು ತಿಳಿಸಿದರು.
ನಿನ್ನೆ ಒಂದು ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇದರಲ್ಲಿ ಮಾಜಿ ಬಿಜೆಪಿ ಶಾಸಕರು ಮತ್ತು ಅವರ ಪುತ್ರ ಸೇರಿದಂತೆ ಏಳು ವ್ಯಕ್ತಿಗಳು ಆಳಂದ ಕ್ಷೇತ್ರದಲ್ಲಿ ಸುಮಾರು 6,000 ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ ಆರೋಪವಿದೆ. ಇದು “ಮತಗಳತನ’ ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾನೂನು ಹೆಜ್ಜೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕೋಟ್ಯಂತರ ಭಾರತೀಯರು ನಮ್ಮ ಪ್ರಜಾಪ್ರಭುತ್ವವನ್ನು ಕದಿಯಲು ನಾವು ಬಿಡುವುದಿಲ್ಲ ಎಂದು ಹೇಳುವ ಮನವಿಪತ್ರದ ಮೇಲೆ ಸಹಿ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಿಮ್ಮ ಮತವನ್ನು ರಕ್ಷಿಸಿ,
ನಿಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಿ,
ನಿಮ್ಮ ಭವಿಷ್ಯವನ್ನು ರಕ್ಷಿಸಿ ಎಂದು ದೇಶದ ಜನರಿಗೆ ಕರೆ ನೀಡಿದರು
ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಭಾರತವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ನಾವು ಘೋಷಿಸಬೇಕಿದೆ.
ನಾವು ಕೋಟ್ಯಂತರ ಭಾರತೀಯರ ಸಹಿಯನ್ನು ಇಲ್ಲಿ ಹಸ್ತಾಂತರಿಸುತ್ತಿದ್ದೇವೆ, ಇದು ಕದ್ದ ಯಾವುದೇ ಚುನಾವಣೆಗಿಂತ ಬಲವಾದ ನೈತಿಕ ಜನಾದೇಶವಾಗಿದೆ ಎಂದು ತಿಳಿಸಿದರು.
ಒಂದು ರಾಷ್ಟ್ರವಾಗಿ, ಒಂದು ಜನರಾಗಿ, ಒಂದು ಪ್ರಜಾಪ್ರಭುತ್ವವಾಗಿ ಏಳೋಣ.
ಮತಗಳ್ಳತನ’ ಭಾರತಕ್ಕೆ ಬೆದರಿಕೆಯೊಡ್ಡಿದಾಗ, ಜನರು ಅದರ ವಿರುದ್ಧ ತಿರುಗಿ ನಿಂತು ಗೆದ್ದರು ಎಂದು ಇತಿಹಾಸದಲ್ಲಿ ದಾಖಲಾಗಲಿ ಸಿಎಂ ಆಶಿಸಿದರು.

