ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಶಾಮೀಲಾಗಿರುವುದು
ಬೇಲಿಯೇ ಎದ್ದು ಹೊಲ ಮೇಯ್ದಂತೆ,ಇದು ಅಕ್ಷಮ್ಯ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.
ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ನಂತರ ಮಾತನಾಡಿದ ಸಿಎಂ,ಪೋಲೀಸ್ ಇಲಾಖೆ ಕೆಲವು ಠಾಣೆಗಳಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರೆ ಮತ್ತೆ ಕೆಲವೆಡೆ ಸರಿಯಾಗಿ ಕೆಲಸ ಮಾಡುತ್ತಿಲ್ಲ.ಸುಮಾರು 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲಾಗಿದ್ದಾರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿರುವುದು ಅಕ್ಷಮ್ಯ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಹಾಗೂ ಪೋಲೀಸ್ ಇಲಾಖೆಗೆ ಕೆಟ್ಟ ಹೆಸರು ತರುವಂಥ ಕೆಲಸವಿದು ಎಂದು ಅತಿ ಬೇಸರದಲ್ಲಿ ಸಿಎಂ ಹೇಳಿದರು.
2003 ರಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರಾಯಚೂರು ಜಿಲ್ಲೆಯ ಕವಿತಾಳ ಪೊಲೀಸ್ ಠಾಣೆ ದೇಶದಲ್ಲಿಯೇ ಉತ್ತಮ ಪೋಲೀಸ್ ಠಾಣೆಗಳ ಸಾಲಿನಲ್ಲಿ ಮೂರನೇ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ಪಟ್ಟರು.
ಪೋಲೀಸ್ ಸಬ್ ಇನ್ಸ್ಪೆಕ್ಟರ್, ಎ ಎಸ್ ಪಿ, ಡಿ ವೈ ಎಸ್ ಪಿ , ಎಸಿಪಿ ಇವರಿಗೆ ಗೊತ್ತಿಲ್ಲದೆ ಯಾವ ಅಪರಾಧವೂ ನಡೆಯಲು ಸಾಧ್ಯವಿಲ್ಲ. ಪೊಲೀಸರು ಜಾಗರೂಕತೆಯಿಂದ ಕೆಲಸ ಮಾಡಬೇಕು, ವಿಶೇಷವಾಗಿ ದುರ್ಬಲರಿಗೆ ರಕ್ಷಣೆ ನೀಡಬೇಕು. ಬಲಾಢ್ಯರ ಕೈಗೊಂಬೆಗಳಂತೆ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಕಳ್ಳತನ, ಸುಲಿಗೆ, ದರೋಡೆ, ಕೊಲೆ ಮುಂತಾದ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ, ಸೈಬರ್ ಅಪರಾಧ ಹಾಗೂ ಡ್ರಗ್ಸ್ ಅಪರಾಧಗಳು ಕಡಿಮೆಯಾಗುತ್ತಿಲ್ಲ,ಯುವಜನರು ಇದರಿಂದ ಹಾಳಾಗುತ್ತಿದ್ದಾರೆ, ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವಾಗಿಸಬೇಕೆಂದು ಸರ್ಕಾರ ಘೋಷಣೆ ಮಾಡಿದೆ. ಪೊಲೀಸರು ಜಾಗರೂಕತೆಯಿಂದ, ದಕ್ಷತೆಯಿಂದ ಕೆಲಸ ಮಾಡಿದರೆ ರಾಜ್ಯವನ್ನು ಮಾದಕ ವಸ್ತು ಮುಕ್ತವನ್ನಾಗಿಸಬಹುದು, ಯುವಜನರನ್ನೂ ರಕ್ಷಿಸಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಪೋಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಡಿ ವೈ ಎಸ್ ಪಿ ಗಳ ಮೇಲೆ ಮೇಲಾಧಿಕಾರಿಗಳು ನಿಗಾ ಇಡಲು ಸೂಚಿಸಲಾಗಿದೆ. ಅಪರಾಧಗಳಲ್ಲಿ ಅವರು ಶಾಮೀಲಾಗಬಾರದು ಎಂದು ಸೂಚಿಸಿದ್ದೇವೆ ಎಂದು ಹೇಳಿದರು.
ಮಹಾರಾಷ್ಟ್ರದ ಪೊಲೀಸರಿಗೆ ಬೆಂಗಳೂರಿಗೆ ಬಂದು ಡ್ರಗ್ಸ್ ಪತ್ತೆಹಚ್ಚಲು ಸಾಧ್ಯವಾದರೆ, ರಾಜ್ಯದ ಪೊಲೀಸರು ಏಕೆ ಮಾಡಬಾರದು ಎಂದು ಕಾರವಾಗಿ ಪ್ರಶ್ನಿಸಿದ ಸಿಎಂ, ರಾಜ್ಯದ ಪೊಲೀಸರು ಇದನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದು,ಸಂಬಂಧಪಟ್ಟ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಸೈಬರ್ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣಕ್ಕೆ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಬೇಕಾಗುತ್ತದೆ. ಹೊಸ ಕಾನೂನು ಅಥವಾ ತಿದ್ದುಪಡಿಯನ್ನು ಮುಂಬರುವ ದಿನಗಳಲ್ಲಿ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬಳ್ಳಾರಿ ಘಟನೆಯನ್ನು ಸಿಐಡಿ ಗೆ ವಹಿಸಲಾಗಿದೆ. ಬಳ್ಳಾರಿ ಸೂಕ್ಷ್ಮ ಪ್ರದೇಶವಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂಬ ಕಾರಣಕ್ಕೆ ಅಮಾನತು ಮಾಡಲಾಗಿದೆ, ತನಿಖಾ ವರದಿ ಬಂದ ನಂತರ ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು.
ರಾಜೀವ್ ಗೌಡರನ್ನು ಬಂಧಿಸಲಾಗುವುದು
ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟದ ಪೌರಾಯುಕ್ತರನ್ನು ನಿಂದಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿಗಳು ಅವರು ತಲೆಮರೆಸಿಕೊಂಡಿದ್ದು,ಅವರನ್ನು ಬಂಧಿಸಲಾಗುವುದು. ಅವರ ಮೇಲೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಪಕ್ಷದವರಾಗಲಿ, ಕಾನೂನಿಗಿಂತ ಯಾರೂ ಮೇಲಲ್ಲ ಎಂದು ಕಡಕ್ಕಾಗಿ ಹೇಳಿದರು.

