ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರೆಂಟಿ ಘೋಷಣೆಯಿಂದ ಅರಾಜಕತೆ ಗ್ಯಾರೆಂಟಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದೆ,ಇದರಿಂದ ರೋಸಿಹೋದ ಜನರು ಬೀದಿಗಿಳಿದಿದ್ದಾರೆ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.
ಈ ಕಾಂಗ್ರೆಸ್ ಸರ್ಕಾರದ ಕೆಟ್ಟ ಕೊಳಕು ಆಡಳಿತದಿಂದಾಗಿ ಸಮಾಜದ ಪ್ರತಿ ವರ್ಗ ಬೀದಿಗಿಳಿದು ಹೋರಾಟ ನಡೆಸುತ್ತಿದೆ ಎಂದು ಕುಟುಕಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಂದ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆದರೆ ಇತ್ತ
ಖಾಲಿ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ ಒಪಿಡಿ ಬಂದ್ ಮಾಡಲು ಮುಂದಾಗಿದ್ದಾರೆ.
37,000 ಕೋಟಿ ರೂ. ಬಾಕಿಗೆ ಆಗ್ರಹಿಸಿ ಗುತ್ತಿಗೆದಾರರು ಮಾರ್ಚ್ 6 ರಂದು ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಹೊರಟಿದ್ದಾರೆ.
ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳು ಪ್ರತಿಭಟನೆಗಿಳಿಯಲಿದ್ದಾರೆ.
ಒಳಮೀಸಲಾತಿಯಿಂದ ಆಗಿರುವ ಅನ್ಯಾಯ ವಿರುದ್ಧ ಎಸ್ಸಿ ಬಲಗೈ ಸಮುದಾಯ ಪ್ರತಿಭಟನೆ,ಬಿಡದಿ ಟೌನ್‌ಶಿಪ್ ಯೋಜನೆ, ಸೆಣಬು ಸಬ್ಸಿಡಿ ಬಂದ್, ಕಬ್ಬು ಬಿಲ್ ಬಾಕಿ ವಿರುದ್ಧ ರೈತರಿಂದ ಬೀದಿಳಿಗಿದು ಪ್ರತಿಭಟನೆ ಮಾಡುತ್ತಿದ್ದಾರೆ.
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಫೆಬ್ರವರಿ 27 ರಿಂದ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ,
38 ತಿಂಗಳ ಹಿಂಬಾಕಿಗಾಗಿ ಸಾರಿಗೆ ನೌಕರರು ಮುಷ್ಕರ ಮಾಡಲಿದ್ದಾರೆ.
ಹೀಗೆ ಮಯಷ್ಕರದ ಸರಮಾಲೆಗಳೇ ಇವೆ. ಅರಾಜಕ ಮುಖ್ಯಮಂತ್ರಿ ಸಿದ್ದರಾಮಯ್ಯ ನವರೇ, ನಿಮ್ಮ ಭ್ರಷ್ಟ ಆಡಳಿತದಲ್ಲಿ ಒಬ್ಬರಾದರೂ ನೆಮ್ಮದಿಯಿಂದ ಇದ್ದಾರಾ, ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಈ ಹೋರಾಟಗಳಿಗಿಂತ ಬೇರೆ ಸಾಕ್ಷಿ ಬೇಕಾ ಇಡೀ ಕರ್ನಾಟಕ ಇಂದು ಅರಾಜಕತೆಯಲ್ಲಿದೆ ಎಂದು ಉದಾಹರಣೆಗಳ ಸಹಿತ ಅಶೋಕ್ ಕಿಡಿಕಾರಿದ್ದಾರೆ.

