ಸೇವ್‌ ಮೈಸೂರು ಸಿಲ್ಕ್‌ ಜನಾಂದೋಲನ ಮಾಡುತ್ತೇವೆ-ಅಶೋಕ್ ಎಚ್ಚರಿಕೆ

ಮೈಸೂರು: ಕಮಿಶನ್‌ ಆಸೆ ಹಾಗೂ ಕೆಎಸ್‌ಐಸಿ ಮುಚ್ಚಿಹಾಕಲು ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಯೋಜನೆ ಕೈ ಬಿಡದೇ ಇದ್ದರೆ ಬಿಜೆಪಿಯಿಂದ ʼಸೇವ್‌ ಮೈಸೂರು ಸಿಲ್ಕ್‌ʼ ಎಂಬ ಹೆಸರಿನ ಜನಾಂದೋಲನವನ್ನು ರೂಪಿಸುತ್ತೇವೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವ್‌ ಮೈಸೂರು ಸಿಲ್ಕ್‌ ಅಭಿಯಾನಕ್ಕಾಗಿ ನಾನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಭೇಟಿ ನೀಡಿದ್ದೇನೆ. ಈ ಸಂಸ್ಥೆಯ ರೇಷ್ಮೆಗೆ ಜಿಐ ಟ್ಯಾಗ್‌ ದೊರೆತಿದ್ದು, ಮೈಸೂರು, ಚಾಮರಾಜನಗರ ಭಾಗದಲ್ಲಿ ಪ್ರತಿಷ್ಠೆಯ ವಿಚಾರವಾಗಿದೆ ಎಂದು ಹೇಳಿದರು.

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಇಂಗ್ಲೆಂಡ್‌ಗೆ ಹೋಗಿ ಅಲ್ಲಿ ರೇಷ್ಮೆ ಸೀರೆಗಳನ್ನು ನೋಡಿ, ಸ್ವಿಜರ್‌ಲ್ಯಾಂಡ್‌ನಿಂದ ಯಂತ್ರಗಳನ್ನು ತರಿಸಿ ಇಲ್ಲಿ ಉದ್ಯಮ ಆರಂಭಿಸಿದ್ದರು, ರೇಷ್ಮೆ ರೈತರಿಗೆ ಲಾಭವಾಗಲಿ ಎಂಬ ಉದ್ದೇಶದಿಂದ ಸ್ಥಾಪಿಸಿದ್ದರು ಎಂದು ತಿಳಿಸಿದರು.

ಚನ್ನಪಟ್ಟಣದ ಕೇಂದ್ರ ಕಾರ್ಖಾನೆಯಲ್ಲಿ ಸುಮಾರು 400 ಕಾರ್ಮಿಕರಿದ್ದಾರೆ. ಟಿ.ನರಸೀಪುರದ ನೂಲು ತೆಗೆಯುವ ಕಾರ್ಖಾನೆ 13 ಎಕರೆ ಜಾಗದಲ್ಲಿದ್ದು, ಅದರಲ್ಲಿ 6 ಎಕರೆಯನ್ನು ಕ್ರೀಡಾ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಚನ್ನಪಟ್ಟಣದಲ್ಲಿ ಒಂದು ತಿಂಗಳಿಗೆ 1,400 ಸೀರೆ ತಯಾರಾಗುತ್ತದೆ, ಅದೆಲ್ಲಾ ಒಂದೇ ದಿನದಲ್ಲಿ ಮಾರಾಟವಾಗುತ್ತದೆ. ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಇದೇ ಸೀರೆಯನ್ನು ಉಡಿಸಲಾಗುತ್ತದೆ, ಮದುವೆ, ಆರತಕ್ಷತೆಗೆ ಇದನ್ನೇ ಬಳಸಲಾಗುತ್ತದೆ ಹೀಗಾಗಿ ಈ ಸೀರೆಗೆ ಪವಿತ್ರತೆ ಹಾಗೂ ಪರಂಪರೆ ಇದೆ ಎಂದು ವಿವರಿಸಿದರು.

ಈ ವರ್ಷ ಕೆಎಸ್‌ಐಸಿ ನಿಗಮಕ್ಕೆ 96 ಕೋಟಿ ರೂ. ಲಾಭ ಬಂದಿದೆ. ಇದನ್ನು ನಿಗಮದ ಸುಧಾರಣೆಗೆ ಬಳಸದೆ ಬೆಸ್ಕಾಂಗೆ ನೀಡಲಾಗಿದೆ. ನಿಗಮ ಅಭಿವೃದ್ಧಿ ಮಾಡಲು ಅಧಿಕಾರಿಗಳು ಫಾರಿನ್‌ ಟ್ರಿಪ್‌ ಮಾಡಿ 1.40 ಕೋಟಿ ರೂ. ಖರ್ಚು ಮಾಡಿದ್ದಾರೆ. ಬೇಡಿಕೆಗೆ ಹತ್ತು ಪಟ್ಟು ಅಧಿಕ ಮಾರುಕಟ್ಟೆ ಇದೆ. ಸುಮಾರು 2,000 ಜನರಿಗೆ ಕೆಲಸವಿದೆ. ಅಂದರೆ ಇದು ಮುಚ್ಚಿಹೋಗುವ ಸಂಸ್ಥೆಯಲ್ಲ ಎಂದು ಹೇಳಿದರು.

ಬಹಳ ಲಾಭದಲ್ಲಿರುವ ಸಂಸ್ಥೆಯಾಗಿದ್ದರೂ ಇಂತಹ ಸಂಸ್ಥೆಯ ಜಾಗದಲ್ಲೇ ಕ್ರೀಡಾಂಗಣ ಮಾಡಲು ಯೋಜನೆ ರೂಪಿಸಲಾಗಿದೆ. ಇದೇ ಜಾಗದಲ್ಲಿ ಕ್ರೀಡಾಂಗಣ ಮಾಡಬೇಕೆಂದೇನೂ ಇಲ್ಲ. ಕಾರ್ಖಾನೆಯಲ್ಲಿ ಬಾಯ್ಲರ್‌ಗಳಿದ್ದು, ಹೆಚ್ಚು ತಾಪಮಾನ ಹಾಗೂ ದುರ್ವಾಸನೆ ಬರುತ್ತದೆ. ಅದಕ್ಕಾಗಿ ಕಾರ್ಖಾನೆಯ ಆವರಣದಲ್ಲಿ ಮರಗಳನ್ನು ಬೆಳೆಸಿದ್ದು, ಇದರಿಂದ ತಾಪಮಾನ ಇಳಿಕೆಯಾಗಿ ಪರಿಸರ ಸಮತೋಲನವಾಗುತ್ತದೆ ಎಂದು ಹೇಳಿದರು.

ಕ್ರೀಡಾಂಗಣ ನಿರ್ಮಿಸಿದರೆ 430 ಮರಗಳನ್ನು ಕಡಿದುಹಾಕಬೇಕಾಗುತ್ತದೆ. ಕ್ರೀಡಾಂಗಣ ನಿರ್ಮಾಣವಾದರೂ, ಪಕ್ಕದಲ್ಲೇ ಬಾಯ್ಲರ್‌ ಇರುತ್ತದೆ. ಹೀಗಾಗಿ ಕ್ರೀಡಾಂಗಣದಲ್ಲಿ ಚಟುವಟಿಕೆ ನಡೆಸಲು ಅನುಮತಿ ಸಿಗುವುದಿಲ್ಲ, ಏನಾದರೂ ಅನಾಹುತವಾದರೆ ಯಾರು ಜವಾಬ್ದಾರಿ ಹೊರುತ್ತಾರೆ, ಈ ಭಾಗದಲ್ಲಿ ಶುದ್ಧ ನೀರು ಸಿಗುವುದರಿಂದ ಸೀರೆಯ ಗುಣಮಟ್ಟ ಹೆಚ್ಚಿದೆ. ಇಂತಹ ಸ್ಥಳದಲ್ಲೇ ಕ್ರೀಡಾಂಗಣ ಮಾಡಲು ನಿರ್ಧರಿಸಿದ್ದಾರೆ ಎಂದು ಅಶೋಕ್ ತಿಳಿಸಿದರು.

ಕಾಂಗ್ರೆಸ್‌ ಕಡೆಯವರು 12 ಕೋಟಿ ರೂ. ಗೆ ಗುತ್ತಿಗೆ ಪಡೆದಿದ್ದು, ಅವರು ಯೋಜನೆ ಜಾರಿಗೆ ಒತ್ತಡ ಹಾಕುತ್ತಿದ್ದಾರೆ. ಒಂದು ಕ್ರೀಡಾಂಗಣದಲ್ಲಿ ಕನಿಷ್ಠ 12 ಎಕರೆ ಜಾಗ ಬೇಕಾಗುತ್ತದೆ. ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ನೂಲು ತೆಗೆಯುವ ಮಿಲ್‌ ಸಮೀಪದಲ್ಲಿದೆ. ಕೆಎಸ್‌ಐಸಿ ಮುಚ್ಚಿಹಾಕಿದರೆ ಇವರ ಖಾಸಗಿ ಕಾರ್ಖಾನೆಗೆ ಬೇಡಿಕೆ ಬರುತ್ತದೆ. ಈ ದುರುದ್ದೇಶದೊಂದಿಗೆ ಯೋಜನೆ ರೂಪಿಸಲಾಗಿದೆ. ಇಲ್ಲಿ ಕಲ್ಲಿದ್ದಲಿನಿಂದ ಟನ್‌ಗಟ್ಟಲೆ ಬೂದಿ ಬರುತ್ತದೆ. ಕ್ರೀಡಾಂಗಣ ಬಂದರೆ ಇದನ್ನು ನಿರ್ವಹಣೆ ಮಾಡಲು ಸಾಧ್ಯವಿಲ್ಲ ಇಂತಹ ಯೋಜನೆ ಸುರಕ್ಷಿತವೂ ಅಲ್ಲ ಎಂದು ಅಶೋಕ್ ವಿವರ ನೀಡಿದರು.

ಸರ್ಕಾರಿ ಉದ್ಯೋಗದ ನೇಮಕಾತಿ ಆದೇಶ ಮಾಡದೆ ವಿದ್ಯಾರ್ಥಿಗಳನ್ನು ಆಟವಾಡಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ನಮ್ಮ ಹೋರಾಟ ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ನೇಮಕಾತಿ ಆದೇಶ ಮಾಡಿದೆ. 2.84 ಲಕ್ಷ ಹುದ್ದೆಗಳಿಗೆ ನಾವು ಹೋರಾಟ ಮಾಡಿದ್ದರೂ, ಸರ್ಕಾರ 56 ಸಾವಿರ ಹುದ್ದೆಗೆ ನೇಮಕ ಆದೇಶ ಮಾಡಿದೆ. ಉಳಿದ ನೇಮಕಾತಿಗೆ ಯಾವಾಗ ಆದೇಶ ಮಾಡುತ್ತಾರೆ ಎಂದು ಸರ್ಕಾರ ತಿಳಿಸಬೇಕು. ಇಲ್ಲವಾದರೆ ಪಾದಯಾತ್ರೆಯ ಚಳವಳಿ ಮಾಡುತ್ತೇವೆ ಎಂದು ಅಶೋಕ್ ಎಚ್ಚರಿಸಿದರು.