ಕಳುವು ಪ್ರಕರಣಗಳ ಭೇದಿಸಿದ ಪೊಲೀಸರು:
ಕೃತಜ್ಞತೆ ಸಲ್ಲಿಸಿದ ವಾರಸುದಾರರು

ಮೈಸೂರು: ಸ್ವತ್ತು ಕಳುವು ಪ್ರಕರಣಗಳನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಗರ ವ್ಯಾಪ್ತಿಯ ಸರಸ್ವತಿಪುರಂ, ಕುವೆಂಪುನಗರ, ಲಷ್ಕರ್, ವಿದ್ಯಾರಣ್ಯಪುರಂ, ವಿಜಯನಗರ, ಮೇಟಗಳ್ಳಿ, ಮಂಡಿ ಹಾಗೂ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಕಳುವು ಪ್ರಕರಣಗಳಲ್ಲಿ 2 ಕೆಜಿ 50 ಗ್ರಾಂ ಚಿನ್ನ, 5 ಕೆಜಿ 312 ಗ್ರಾಂ ಬೆಳ್ಳಿ ಪದಾರ್ಥಗಳು, 57 ವಿವಿಧ ಬಗೆಯ ವಾಹನಗಳು ಸೇರಿದಂತೆ ಒಟ್ಟು 2,96,36,000 ಮೌಲ್ಯದ ಚಿನ್ನಾಭರಣ ಹಾಗೂ 10,03,000 ನಗದು ಮತ್ತು ಇತರೆ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

2026ನೇ ಸಾಲಿನಲ್ಲಿ 22 ಎನ್‌ಡಿಪಿಎಸ್ ಕಾಯ್ದೆಯ ಪ್ರಕರಣಗಳನ್ನು ದಾಖಲಿಸಲಾಗಿದೆ, ಈ ಪೈಕಿ 30 ಕೆಜಿ 250 ಗ್ರಾಂ ಗಾಂಜಾ ಮತ್ತು 311 ಗ್ರಾಂ 579 ಮಿಲಿಗ್ರಾಂ ಸಿಂಥೆಟಿಕ್ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಲವಾರು ಪ್ರಕರಣಗಳಲ್ಲಿ ಆರೋಪಿಗಳು ಆಧುನಿಕ ತಂತ್ರಜ್ಞಾನ, ಸ್ಯಾಟಲೈಟ್ ಮೂಲಕ ಒಂಟಿ ಮನೆಗಳನ್ನು ಪತ್ತೆಹಚ್ಚಿ ಕಳ್ಳತನ ಮಾಡಿದ್ದಾರೆ, ಪರಿಚಯಸ್ಥರಂತೆ ನಂಬಿಸಿ ಚಿನ್ನಾಭರಣ ಕಳವು ಮಾಡಿರುವುದು ಪತ್ತೆಯಾಗಿದೆ. ಇಂತಹ ಎಲ್ಲಾ ಪ್ರಕರಣಗಳನ್ನು ಬೇಧಿಸುವಲ್ಲಿ ಮೈಸೂರು ನಗರ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಸೀಮಾ ಲಾಟ್ಜರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಪ್ರಕರಣಗಳನ್ನು ಬೇಧಿಸಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾಪತ್ರ ನೀಡಿ ಅಭಿನಂದಿಸಲಾಗಿದೆ.

ಈ ವೇಳೆ ಮೈಸೂರು ನಗರ ಉಪ ಪೊಲೀಸ್ ಆಯುಕ್ತರಾದ ಸುಂದರ್ ರಾಜ್, ರವಿ ಪ್ರಸಾದ್ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಇದೇ ವೇಳೆ ಕಳುವಾಗಿದ್ದ ಕಾರು ಮರಳಿ ಪಡೆದಿದ್ದಕ್ಕೆ ರಾಣಿ, ಆಟೋ ಮರಳಿ ಸಿಕ್ಕಿರುವುದು ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಆಟೋ ಚಾಲಕ ರವಿ ಮತ್ತು ನಗರದ ರೈಲ್ವೆ ನಿಲ್ದಾಣದ ಮುಂದೆ ಸಹಾಯ ಮಾಡುವ ನೆಪದಲ್ಲಿ ಹಲ್ಲೆ ಮಾಡಿ ಕಾರು, ಚಿನ್ನಾಭರಣ ಕಿತ್ತುಕೊಂಡಿದ್ದರು. ಕೇವಲ 48 ಗಂಟೆಗಳಲ್ಲಿ ಪೊಲೀಸರು ಪ್ರಕರಣವನ್ನು ಬೇಧಿಸಿ ಕಾರು ವಶಪಡಿಸಿಕೊಂಡಿದ್ದಾರೆ ಎಂದು ಆಕಾಶ್ ಆದಿತ್ಯ ಮೆಚ್ಚುಗೆ ‌ವ್ಯಕ್ತಪಡಿಸಿ ಪೊಲೀಸರಿಗೆ‌ ಕೃತಜ್ಞತೆ ಸಲ್ಲಿಸಿದರು.