ಮಂಡ್ಯ: ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಪಾಪರ್ ಮಾಡಲು ಮುಂದಾಗಿದೆ. ಇದರಿಂದಾಗಿ ಎಲ್ಲರೂ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಭ್ರಷ್ಟಾಚಾರ, ಸಿಎಂ ಕುರ್ಚಿ ಕಾಳಗ, ಅನುದಾನ ಕೊರತೆ ಮತ್ತಿತರ ಸಾವಿರಾರು ಸಮಸ್ಯೆಗಳಲ್ಲೇ ಕಾಂಗ್ರೆಸ್ ಸರ್ಕಾರದ ಸಾವಿರದ ದಿನಗಳು ಕಳೆದುಹೋಗಿದೆ ಎಂದು ಟೀಕಿಸಿದರು.
ಸರ್ಕಾರಿ ಆಸ್ಪತ್ರೆಗಳಿಗಾಗಿ ಇನ್ನೂ ಅಗತ್ಯ ಔಷಧಿಗಳನ್ನು ಖರೀದಿ ಮಾಡಿಲ್ಲ. ಈ ನಡುವೆ, ಸ್ಥಳೀಯ ವೈದ್ಯಾಧಿಕಾರಿಗಳು ಔಷಧಿ ಖರೀದಿಸುವುದು ಬೇಡ, ಸರ್ಕಾರದಿಂದಲೇ ಖರೀದಿಸುವವರೆಗೆ ಕಾಯಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ಮಾರ್ಚ್ 13 ರಿಂದ ಸರ್ಕಾರಿ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ಇದರಿಂದಾಗಿ ರೋಗಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂದು ಎಚ್ಚರಿಸಿದರು.
ಆರೋಗ್ಯ ಇಲಾಖೆಯೇ ಅನಾರೋಗ್ಯ ಪೀಡಿತವಾಗಿದ್ದು, ಬಜೆಟ್ ನಲ್ಲಿ ಶೇ.40 ರಷ್ಟು ಅನುದಾನ ಕಡಿತವಾಗಿದೆ. ಗ್ಯಾರಂಟಿಗಳು ಹೊರೆಯಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಎಲ್ಲ ಇಲಾಖೆಗಳಲ್ಲಿ ಅನುದಾನ ಕೊರತೆಯಾಗಿದೆ. ಇ-ಖಾತೆಯನ್ನು ಉಚಿತವಾಗಿ ಸರ್ಕಾರದಿಂದಲೇ ಮಾಡಬೇಕಿತ್ತು. ಅದನ್ನು ಬಿಟ್ಟು ಲಂಚಕ್ಕೆ ದಾರಿ ಮಾಡಿದ್ದಾರೆ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.
ಇ-ಖಾತಾ ಮಾಡಿಸಲು 30,000 ರೂ. ಲಂಚ ನೀಡಬೇಕಿದೆ. ನಿಗದಿತ ಗುರಿಗಿಂತ ಶೇ 20 ನಷ್ಟು ಆದಾಯ ಖೋತಾ ಆಗಿದೆ. ಅಬಕಾರಿ ಇಲಾಖೆಯಲ್ಲಿ ಮದ್ಯದಂಗಡಿ ಆರಂಭಿಸಲು ಕೋಟಿಗಟ್ಟಲೆ ಹಣ ನೀಡಬೇಕಿದೆ. ಮಹಾತ್ಮ ಗಾಂಧಿಯವರ ಆದರ್ಶಗಳ ಬಗ್ಗೆ ಮಾತಾಡುವ ಕಾಂಗ್ರೆಸ್ ನಾಯಕರು ಹೊಸ ಮದ್ಯದಂಗಡಿಗಳನ್ನು ಆರಂಭಿಸಲು ಲಂಚ ಪಡೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಐದು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಅಶೋಕ, ಸಚಿವರ ಬದಲಾವಣೆಯ ಸುದ್ದಿ ಬಂದರೆ ಸಚಿವರು ಹೈಕಮಾಂಡ್‌ಗೆ ಹಣ ನೀಡಬೇಕಾಗುತ್ತದೆ. ಡಿ.ಕೆ.ಶಿವಕುಮಾರ್, ಜಾರ್ಜ್ ಮೊದಲಾದವರನ್ನು ಚುನಾವಣೆಗೆ ನೇಮಿಸಲಾಗಿದೆ. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ ಎಂದು ಗುಡುಗಿದರು.
ಅಂಗನವಾಡಿ ಕಾರ್ಯಕರ್ತರು, ಗುತ್ತಿಗೆದಾರರು, ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಬೊಕ್ಕಸ ಖಾಲಿಯಾಗಿರುವುದರಿಂದ ಎಲ್ಲರೂ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಹಿಂದಿನ ಯಾವುದೇ ಮುಖ್ಯಮಂತ್ರಿ ಇಷ್ಟು ಸಾಲ ಮಾಡಿಲ್ಲ. ಐದು ವರ್ಷ ಪೂರ್ಣಗೊಳ್ಳುವಾಗ ಒಟ್ಟು ಸಾಲ 6 ಲಕ್ಷ ಕೋಟಿ ರೂ.ಗೆ ಏರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಹಿಂದೂ ಸಮಾಜೋತ್ಸವದ ಹಿಂದಿನ ದಿನ ಹಿಂದೂಗಳ ಮೇಲೆ ಹಲ್ಲೆಯಾಗಿದೆ. ಈ ರೀತಿಯ ಘಟನೆಗಳು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೂ ಸಂಘಟನೆಗಳ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುತ್ತಿದೆ, ಎಲ್ಲ ಜಿಲ್ಲೆಗಳ ಹಿಂದೂ ಕಾರ್ಯಕ್ರಮಗಳ ಮೇಲೆ ಕಲ್ಲು ತೂರಾಟವಾಗುತ್ತಿದೆ. ಕಾಂಗ್ರೆಸ್ ಇದನ್ನು ಮಾಡಿಸುತ್ತಿದೆ, ರಾಜ್ಯದಲ್ಲಿ ಎಲ್ಲೇ ಏನೇ ಆದರೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಕುರ್ಚಿ ಬಿಡುವ ರಾಮಯ್ಯ ಅಲ್ಲ, ಇವರೆಲ್ಲ ಸೇರಿ ಡಿ.ಕೆ.ಶಿವಕುಮಾರ್‌ಗೆ ನಾಮ ಹಾಕುತ್ತಾರೆ ಎಂದು ಅಶೋಕ್ ಲೇವಡಿ ಮಾಡಿದರು.

