ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಕೈಬಿಟ್ಟ ಸರ್ಕಾರ:ಶ್ರೀವತ್ಸ ಸ್ವಾಗತ

ಮೈಸೂರು: ಟಿ. ನರಸೀಪುರದ ಕೆಎಸ್ಐಸಿ ಫಿಲೇಚರ್ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಜನವಿರೋಧಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ ಎಂದು ರೇಷ್ಮೆ ಸಚಿವ ವೆಂಕಟೇಶ್ ಅವರು ಸದನದಲ್ಲಿ ಉತ್ತರ ನೀಡಿದ್ದು‌,ಶಾಸಕ ಶ್ರೀವತ್ಸ ಸ್ವಾಗತಿಸಿದ್ದಾರೆ.

ಇದರಿಂದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಕರ್ನಾಟಕದ ಅಸ್ಮಿತೆ ಕೆಎಸ್ಐಸಿ ಮೈಸೂರು ಸಿಲ್ಕ್ ಉದ್ದಿಮೆಯನ್ನು ಉಳಿಸುವ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದಂತಾಗಿದೆ ಎಂದು ಅವರು ಟ್ವೀಟ್ ಮಾಡಿ‌ ತಿಳಿಸಿದ್ದಾರೆ.

ಕ್ರೀಡಾಂಗಣದ ನೆಪದಲ್ಲಿ 100 ವರ್ಷಗಳಿಗೂ ಹಳೆಯದಾದ 500 ಮರಗಳನ್ನು ಕಡಿದು, ಶತಮಾನದ ರೇಷ್ಮೆ ಉದ್ಯಮವನ್ನು ಹಾಗೂ ಅಪರೂಪದ ಜೀವವೈವಿಧ್ಯತೆಯನ್ನು ನಾಶಮಾಡಲು ಮುಂದಾಗಿದ್ದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದ ಕಾರ್ಖಾನೆಯ ಕಾರ್ಮಿಕರಿಗೆ ಬಿಜೆಪಿ ಬೆಂಬಲಿಸಿತ್ತು. ನಾನು ಖುದ್ದಾಗಿ ಕಾರ್ಖಾನೆಗೆ ಭೇಟಿ ನೀಡಿ ಪ್ರತಿಭಟನಾ ನಿರತ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೆ ಎಂದು ಟಿ.ಎಸ್. ಶ್ರೀವತ್ಸ ತಿಳಿಸಿದ್ದಾರೆ.

ನಮ್ಮ ಹೋರಾಟಕ್ಕೆ ಮಣಿದಿರುವ ಕಾಂಗ್ರೆಸ್ ಸರ್ಕಾರ , ಕನ್ನಡಿಗರ ಅಸ್ಮಿತೆ ಕೆಎಸ್ಐಸಿ ಮೈಸೂರು ಸಿಲ್ಕ್ ಉದ್ಯಮವನ್ನು ಅಳಿಸಿ ಹಾಕುವ ದುಸ್ಸಾಹಸದಿಂದ ಹಿಂದೆ ಸರಿದಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಹಲವಾರು ದಶಕಗಳಿಂದ ಉತ್ಕೃಷ್ಟ ಗುಣಮಟ್ಟದ ರೇಷ್ಮೆ ಸೀರೆಗಳ ಮೂಲಕ ಜನಪ್ರಿಯತೆ ಕಾಯ್ದುಕೊಂಡು ಲಾಭದಾಯಕವಾಗಿರುವ ಒಂದು ಪಾರಂಪರಿಕ ಸಾರ್ವಜನಿಕ ಉದ್ದಿಮೆಯನ್ನು ಮುಚ್ಚಲು ಹೊರಟಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕಡೆಗೂ ಜ್ಞಾನೋದಯವಾಗಿರುವುದು ಸಮಾಧಾನದ ವಿಚಾರ,ಇನ್ನು ಮುಂದಾದರೂ ಇಂತಹ ಜನವಿರೋಧಿ, ನಾಡದ್ರೋಹಿ ಕೆಲಸಗಳಿಗೆ ಕೈಹಾಕದೆ ಉತ್ತಮ ಆಡಳಿತ ಕೊಡುವ ಕಡೆ ಗಮನ ಹರಿಸಲಿ ಎಂದು ಶ್ರೀವತ್ಸ ಆಗ್ರಹಿಸಿದ್ದಾರೆ.