ಮೈಸೂರು: ಬಲಾಢ್ಯರ ಕೈಯಲ್ಲಿ ಅಧಿಕಾರ ಇದ್ದರೆ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯವಾಗಲಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಭಾನುವಾರ ಮೈಸೂರಿನ ಪೊಲೀಸ್ ಅಕಾಡೆಮಿ ಕವಾಯತು ಮೈದಾನದಲ್ಲಿ ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು.
ಪೊಲೀಸರು ದೊಡ್ಡವರ ಆಸೆ ಅಮಿಷಗಳಿಗೆ ಒಳಗಾಗಬಾರದು. ಶ್ರೀಮಂತರು ಪೊಲೀಸರನ್ನು ದುರುಪಯೋಗಪಡಿಸಿ ಕೊಳ್ಳಲು ಯತ್ನಿಸುತ್ತಾರೆ ಎಂದು ತಿಳಿ ಹೇಳಿದರು.
ಪೊಲೀಸ್ ಅಂದರೆ ಶಿಸ್ತು, ಧೈರ್ಯ, ಪ್ರಾಮಾಣಿಕತೆ.ಇಂತಹ ಅತ್ಯುತ್ತಮ ಕೆಲಸದಲ್ಲಿ ನೀವು ತೊಡಗಿದ್ದೀರಿ ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
ಮೂರು ವರ್ಷಗಳಲ್ಲಿ
ಖಾಲಿ ಇದ್ದ 4,011 ಪಿಎಸ್ ಐ ಸ್ಥಾನ ಭರ್ತಿ ಮಾಡಿದ್ದೇವೆ,ಖಾಲಿ ಇರುವ 8 ಸಾವಿರ ಪಿಎಸ್ ಐ ಹುದ್ದೆ ಈ ವರ್ಷ ಭರ್ತಿ ಮಾಡುತ್ತೇವೆ ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.
ಪೊಲೀಸರು ತಮ್ಮ
ಕೆಲಸದಲ್ಲಿ ಇದ್ದಾಗ ಮನೆಯ ಸದಸ್ಯರ ಬಗ್ಗೆ ಯೋಚನೆ ಮಾಡಬೇಡಿ. ನಿಮ್ಮ ರಕ್ಷಣೆಗೆ ಸರಕಾರ ಇದೆ ಎಂದು ಅಭಯ ನೀಡಿದರು.
ಮಾದಕ ವಸ್ತು ಮುಕ್ತ ರಾಜ್ಯ ನಿರ್ಮಾಣ ನಮ್ಮ ಸರಕಾರದ ಸಂಕಲ್ಪ.ವಾಗಿದೆ, ಪೊಲೀಸರು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಿಎಂ ಪೊಲೀಸರಿಗೆ ಕರೆ ನೀಡಿದರು.
ಆಯಾ ಠಾಣಾ ವ್ಯಾಪ್ತಿಯಲ್ಲಿ ಯಾರು ಡ್ರಗ್ಸ್ ತಯಾರಿ ಮಾಡುತ್ತಾರೆ. ಯಾರು ಡ್ರಗ್ಸ್ ಮಾರಾಟ ಮಾಡುತ್ತಾರೆ ಎಂಬುದು ಇನ್ ಸ್ಪೆಕ್ಟರ್ ಹಾಗೂ ಸಬ್ ಇನ್ ಸ್ಪೆಕ್ಟರ್ ಗಳಿಗೆ ಗೊತ್ತಿರುತ್ತದೆ. ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಪೊಲೀಸರು ಸಜ್ಜಾಗಬೇಕು ಎಂದು ಸಿಎಂ ಸೂಚಿಸಿದರು.
ಮಾನವೀಯತೆಯಿಂದ ಹಾಗೂ ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ಅಪರಾಧಿಗಳಿಗೆ ಕರುಣೆ ತೋರದೆ ನಿಷ್ಠುರವಾಗಿ ನಡೆದು ಕೊಳ್ಳಿ ಎಂದು ಮುಖ್ಯಮಂತ್ರಿ ಗಳು ಪೊಲೀಸರಿಗೆ ಸಲಹೆ ನೀಡಿದರು.
ಸೈಬರ್ ಕ್ರೈಮ್ ಈಗ ಹೆಚ್ಚಾಗಿದೆ. ಸೈಬರ್ ಕ್ರೈಂ ಮಾಡುವವರನ್ನು ಪತ್ತೆಹಚ್ಚಬೇಕು ಎಂದು ಸಿದ್ದರಾಮಯ್ಯ ಕಡಕ್ ಸೂಚನೆ ನೀಡಿದರು.
12 ಗಂಟೆ ರಾತ್ರಿಯಲ್ಲಿ ಮಹಿಳೆಯರು ನಿರ್ಭಯವಾಗಿ ಓಡಾಡಬೇಕು. ಇಂತಹ ಸಮಾಜ ನಿರ್ಮಾಣ ಆಗಬೇಕು. ಇದು ಮಹಾತ್ಮ ಗಾಂಧೀಜಿ ಆಶಯ ಎಂದು ಹೇಳಿ, ಎಷ್ಟೇ ಕಷ್ಟವಾದರು ಕೂಡ ಪೊಲೀಸನವರು ನ್ಯಾಯ ಎತ್ತಿ ಹಿಡಿಯಬೇಕು. ನ್ಯಾಯ ಎತ್ತಿ ಹಿಡಿಯುವ ವಿಚಾರದಲ್ಲಿ ಯಾರ ಜೊತೆಯೂ ಪೊಲೀಸರು ರಾಜೀ ಆಗಬಾರದು ಎಂದು ಅವರು ತಿಳಿಸಿದರು.
ಗೃಹ ಸಚಿವರಾದ ಜಿ.ಪರಮೇಶ್ವರ್, ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಸಲೀಂ ಅವರು ಉಪಸ್ಥಿತರಿದ್ದರು.

