ಮೈಸೂರು: ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವುದು ಸತ್ಯ ಮೇವ ಜಯತೇ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿ ಎಲ್ಲರೂ ಒಳ್ಳೆಯವರು ಅಲ್ಲ, ಎಲ್ಲರೂ ಭ್ರಷ್ಟಾಚಾರಿಗಳು, ಅಪ್ರಾಮಾಣಿಕರಲ್ಲ. ಒಳ್ಳೆಯವರು-ಕೆಟ್ಟವರು ಇದ್ದೆ ಇರುತ್ತಾರೆ ಎಂದು ಹೇಳಿದರು.
ಗ್ರೂಪ್ ಡಿ ನೌಕರನಿಂದ ಹಿಡಿದು ಮುಖ್ಯ ಕಾರ್ಯದರ್ಶಿ ತನಕ ಅಧಿಕಾರಿಗಳು ಸರ್ಕಾರದ ಸೇವಕರು. ಗ್ರಾಪಂ ಸದಸ್ಯನಿಂದ ಮುಖ್ಯಮಂತ್ರಿ, ಪ್ರಧಾನಮಂತ್ರಿವರೆಗೆ ಸಾರ್ವಜನಿಕರ ಸೇವಕರು ಆಗಿರುತ್ತಾರೆ. ಅವರವರ ಜವಾಬ್ದಾರಿಯನ್ನು ಅರಿತು ಅವರುಗಳು ಕೆಲಸ ಮಾಡಬೇಕು ಎಂದು ಹೇಳಿದರು.
ರೋಹಿಣಿ ಸಿಂಧೂರಿ ಅವರ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನ ಪೂರ್ಣಭಾಗವನ್ನು ಓದಿಲ್ಲ. ಕೆಲವನ್ನು ನೋಡಿದ್ದೇನೆ. ಕೆಲವು ಅಂಶಗಳನ್ನು ನ್ಯಾಯಾಧೀಶರು ಹೇಳಿದ್ದಾರೆ. ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇನೆ. ಭಾನುವಾರ ದಾಖಲೆಗಳೊಂದಿಗೆ ಮಹತ್ವದ ವಿಚಾರ ಹಂಚಿಕೊಳ್ಳುತ್ತೇನೆ ಎಂದು ಸಾ ರಾ ಮಹೇಶ್ ತಿಳಿಸಿದರು.
ಸಾಲಿಗ್ರಾಮದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿರುವುದನ್ನು ನೋಡಿದರೆ ಅಧಿಕಾರಿಗಳ ಮೇಲೆ ಕಂಟ್ರೋಲ್ ಇಲ್ಲ ಎಂಬುದು ಗೊತ್ತಾಗುತ್ತದೆ. ಇದು ಸದನದಲ್ಲಿ ಮಾತನಾಡುವ ಅಂಶವೇ ಎಂದು ಟೀಕಿಸಿದರು.
ಎಸ್.ಡಿ.ರವಿಶಂಕರ್ ಅವರು ಜಿಪಂ ಸದಸ್ಯರಂತೆ ವರ್ತಿಸದೇ, ಶಾಸಕರಂತೆ ವರ್ತಿಸಲಿ. ತಾಲ್ಲೂಕಿನ ಅಧಿಕಾರಿಗಳನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಾಲಿಗ್ರಾಮ ಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಬಂಧದ ವಿಚಾರವನ್ನು ವಿಧಾನಸಭೆಯಲ್ಲಿ ಚರ್ಚೆ ಮಾಡುವುದಲ್ಲ, ಯಾವುದನ್ನು ಎಲ್ಲಿ ಚರ್ಚೆ ಮಾಡಬೇಕು ಎಂಬುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಸಾ.ರಾ.ಮಹೇಶ್ ಸಲಹೆ ನೀಡಿದರು.

