ನವದೆಹಲಿ: ಸುಮಾರು 35 ದಿನಗಳಿಂದ ನಡೆಯುತ್ತಿದ್ದ ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ತಲ್ಲಣಗೊಂಡಿತ್ತು.
ಇದೀಗ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ಘೋಷಣೆ ಮಾಡಿದ ತಕ್ಷಣವೇ ತೈಲ ಬೆಲೆ ಕುಸಿತವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ 13 ಶೇಕಡಕ್ಕೂ ಹೆಚ್ಚು ಇಳಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 94.94 ಡಾಲರ್ ಮಟ್ಟದಲ್ಲಿ ವಹಿವಾಟಾಗುತ್ತಿದೆ.
ಇದು 13.62 ಶೇಕಡಾ ಅಥವಾ ಸುಮಾರು 14.88 ಡಾಲರ್ ಇಳಿಕೆಯಾಗಿದೆ. ಇದೇ ವೇಳೆ ಅಮೆರಿಕದ ಡಬ್ಲ್ಯುಟಿಐ ಕಚ್ಚಾ ತೈಲವೂ 14.60 ಶೇಕಡಾ ಅಂದತೆ 16.49 ಡಾಲರ್ ಕುಸಿದಿದ್ದು ಪ್ರತಿ ಬ್ಯಾರೆಲ್‌ಗೆ 96.46 ಡಾಲರ್ ಮಟ್ಟಕ್ಕೆ ತಲುಪಿದೆ.
ಯುದ್ಧಕ್ಕೂ ಮುನ್ನ ಬ್ರೆಂಟ್ ಕಚ್ಚಾ ತೈಲದ ಬೆಲೆ 62 ರಿಂದ 65 ಡಾಲರ್ ನಡುವೆಯೇ ಇತ್ತು. ಆದರೆ ಉದ್ವಿಗ್ನತೆ ಹೆಚ್ಚಾದಂತೆ ಬೆಲೆಗಳು ವೇಗವಾಗಿ ಏರಿಕೆಯಾಗಿ, ಒಂದು ಹಂತದಲ್ಲಿ 119 ಡಾಲರ್ ತಲುಪಿತ್ತು,ಅಲ್ಲದೆ ಇತ್ತೀಚೆಗೆ 110 ಡಾಲರ್ ತಲುಪಿತ್ತು.
ಈ ಏರಿಕೆಗೆ ಪ್ರಮುಖ ಕಾರಣ ಯುದ್ಧದಿಂದ ಉಂಟಾದ ಸರಬರಾಜು ಅಡಚಣೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ತೈಲ ಸರಬರಾಜು ಮೇಲೆ ಆತಂಕ ಹೆಚ್ಚಾಗಿತ್ತು.
ಜಗತ್ತಿನ ಮಹತ್ವದ ತೈಲ ಸಾಗಣೆ ಈ ಮಾರ್ಗದ ಮೂಲಕ ನಡೆಯುವುದರಿಂದ, ಇಲ್ಲಿ ಎದುರಾಗುವ ಯಾವುದೇ ವ್ಯತ್ಯಯವು ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತವೆ.

