ಬಿಸಿಲ ಝಳಕ್ಕೆ ನೀರಿಗಿಳಿದು ಆಟ ಆಡಲು ಹೋಗಿ ಪ್ರಾಣ ಕಳೆದುಕೊಳ್ಳದಿರಿ

ಮಡಿಕೇರಿ: ಬೇಸಿಗೆಯಲ್ಲಿ ಬಿಸಿಲ ಝಳಕ್ಕೆ ನೀರಿಗಿಳಿದು ಆಟ ಆಡಲು ಜನ ಹಾತೊರೆಯುತ್ತಾರೆ.ಆದರೆ ಸ್ವಲ್ಪ ಯಾಮಾರಿದರೂ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.

ಕೊಡಗಿನ ತಂಪಾದ ವಾತಾವರಣ, ಹರಿಯುವ ನದಿಗಳು, ಜಲಪಾತಗಳು ಜನರನ್ನು ತಮ್ಮತ್ತ ಸೆಳೆಯುತ್ತವೆ. ಆದರೆ ಇದೇ ಆಕರ್ಷಣೆ ಅನೇಕ ಬಾರಿ ಅವಗಢಗಳಿಗೆ ಕಾರಣವಾಗುತ್ತಿದೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕರು ಗುಂಪಾಗಿ ಹೋಗಿ ನದಿ, ಹೊಳೆಗಳಲ್ಲಿ ಇಳಿದು ಆಟವಾಡುವ ವೇಳೆ ಅಜಾಗರೂಕತೆಯಿಂದಾಗಿ ದುರ್ಘಟನೆಗಳು ಸಂಭವಿಸುತ್ತಲೇ ಇದೆ.ಆದರೂ ಯುವಜನ ಅರ್ಥ ಮಾಡಿಕೊಳ್ಳುವುದೇ ಇಲ್ಲ.

ನೀರಿನ ಆಳ, ಹರಿವಿನ ತೀವ್ರತೆ, ತಕ್ಷಣ ಬದಲಾಗುವ ಪರಿಸ್ಥಿತಿಗಳ ಬಗ್ಗೆ ಅರಿವು ಇಲ್ಲದೆ ನೀರಿಗೆ ಇಳಿಯುವುದು ಅಪಾಯಕಾರಿ.

ಹೊರಗೆ ಶಾಂತವಾಗಿ ಕಾಣುವ ನೀರಿನ ಅಡಿಯಲ್ಲಿ ಆಳವಾದ ಕುಣಿಗಳು, ತೀವ್ರ ಸುಳಿಗಳು ಇರುತ್ತವೆ. ಇದನ್ನೆಲ್ಲ ತಿಳಿಯದೆ ಯುವಕರು ನೀರಿಗಿಳಿಯುತ್ತಾರೆ ಹಾಗಾಗಿಯೇ ಕೊಡಗಿನಲ್ಲಿ ಬೇಸಿಗೆಯಲ್ಲಿ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಪ್ರವಾಸಿಗರು ಸೆಲ್ಫಿ, ವಿಡಿಯೋ ತೆಗೆದುಕೊಳ್ಳುವ ಉತ್ಸಾಹದಲ್ಲಿ ಎಚ್ಚರಿಕೆ ಫಲಕಗಳನ್ನು ಕಡೆಗಣಿಸುತ್ತಾರೆ. ಮದ್ಯಪಾನ ಮಾಡಿದ ಬಳಿಕ ನೀರಿಗೆ ಇಳಿಯುವುದು, ಸ್ನೇಹಿತರ ಒತ್ತಾಯಕ್ಕೆ ಮಣಿದು ನೀರಿನಲ್ಲಿ ಆಟವಾಡಲು ಮುಂದಾಗುವುದು, ಸ್ಥಳೀಯರ ಸೂಚನೆಗಳನ್ನು ನಿರ್ಲಕ್ಷಿಸುವುದರಿಂದ ಅವಗಢಗಳು ಸಂಭವಿಸತ್ತವೆ ಇಲ್ಲುನ ಜನರೇ ಹೇಳುತ್ತಾರೆ‌

ಸ್ಥಳೀಯ ಆಡಳಿತ ಹಾಗೂ ಅರಣ್ಯ ಇಲಾಖೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿದ್ದರೂ ಅವುಗಳನ್ನು ಉದಾಸೀನ ಮಾಡುವುದರಿಂದ ಅಪಾಯಗಳು ಸಂಭವಿಸುತ್ತಿವೆ. ಜೀವಕ್ಕಿಂತ ಮೋಜು ಮುಖ್ಯವಲ್ಲ ಎಂಬ ಅರಿವು ಎಲ್ಲರಲ್ಲೂ ಮೂಡಬೇಕಿದೆ.

ಪೋಷಕರು ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳ ಚಟುವಟಿಕೆ ಬಗ್ಗೆ ನಿಗಾವಹಿಸುವುದು ಅತ್ಯಗತ್ಯವಾಗಿದೆ. ಕೆರೆ, ನದಿ, ಜಲಪಾತಗಳ ಬಳಿ ಇರುವ ಸ್ಥಳೀಯರೂ ಈ ಬಗ್ಗೆ ಎಚ್ಚರ ವಹಿಸಿದರೆ ಅವಘಡಗಳನ್ನು ತಪ್ಪಿಸಬಹುದಾಗಿದೆ.

ಕೊಡಗು ಜಿಲ್ಲೆಯ ನದಿ, ಜಲಾಶಯಗಳ ಬದಿಯಲ್ಲಿ ಅನೇಕ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳಿವೆ. ಅಲ್ಲಿಗೆ ಆಗಮಿಸುವ ಪ್ರವಾಸಿಗರು ನೀರಿಗಿಳಿದು ಅಪಾಯವನ್ನು ತಂದುಕೊಳ್ಳುತ್ತಾರೆ.

ಇತ್ತೀಚೆಗೆ ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಇಂತಹದ್ದೇ ಘಟನೆ ನಡೆದು ಪ್ರವಾಸಿಗರೊಬ್ಬರು ಪ್ರಾಣ ಕಳೆದು ಕೊಂಡಿದ್ದರು. ಹಾಗಾಗಿ ಇಂತಹ ಹೋಂಸ್ಟೇ ಮತ್ತು ರೆಸಾರ್ಟ್‌ನವರೇ ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳು ಅಗತ್ಯವಿದೆ.

ಸುರಕ್ಷತಾ ಕ್ರಮವಾಗಿ ಸೂಚನಾ ಫಲಕಗಳನ್ನು ಅಳವಡಿಸುವುದು, ಈಜು ತಜ್ಞರನ್ನು ನೇಮಿಸಿಕೊಳ್ಳುವುದು, ಲೈಫ್ ಜಾಕೆಟ್‌ನಂತಹ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಗ್ನಿಶಾಮಕ ಅಧಿಕಾರಿ ಚಂದ್ರಶೇಖರ ಪಿ.ಭಂಡಾರಿ ಸಲಹೆ ನೀಡಿದ್ದಾರೆ.

ಕೊಡಗಿನಲ್ಲಿ ಅಪಾಯದ ಸ್ಥಳಗಳು:
ಹಾರಂಗಿ ಹಿನ್ನೀರು
ದುಬಾರೆ ಕಾವೇರಿ ನದಿ ತಟ
ಚೇಲಾವರ ಜಲಪಾತ
ಇರ್ಪು ಜಲಪಾತ
ನಿಸರ್ಗಧಾಮ
ಬರಪೊಳೆ ನದಿ
ಕೋಟೆ ಅಬ್ಬಿ
ತೋಟಗಳಲ್ಲಿನ ಖಾಸಗಿ ಕೆರೆಗಳು.

ತಪ್ಪದೇ ವಹಿಸಬೇಕಾದ ಎಚ್ಚರಿಕೆಗಳು:
ನೀರಿನ ಆಳ ತಿಳಿಯದೆ ಇಳಿಯಬೇಡಿ
ಎಚ್ಚರಿಕೆ ಫಲಕಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
ಮದ್ಯಪಾನ ಮಾಡಿ ನೀರಿಗೆ ಇಳಿಯಬೇಡಿ
ಮಕ್ಕಳನ್ನು ಒಂಟಿಯಾಗಿ ಬಿಡಬೇಡಿ
ಜಾರು ಬಂಡೆಗಳ ಮೇಲೆ ನಿಲ್ಲಬೇಡಿ ಲೈಫ್ ಜಾಕೆಟ್ ಇಲ್ಲದೆ ಸಾಹಸ ಚಟುವಟಿಕೆ ಬೇಡ ಸ್ಥಳೀಯರ ಸೂಚನೆಗಳನ್ನು ಪಾಲಿಸುವಂತೆ ಚಂದ್ರಶೇಖರ್ ಮನವಿ ಮಾಡಿದ್ದಾರೆ.