ಮೈಸೂರು: ಎರಡು ಕ್ಷೇತ್ರಗಳ ಉಪಚುನಾವಣೆ ಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆಗೆ ನಾನು ಹೋಗಿಲ್ಲ,ನನಗೆ ಬಾಗಲಕೋಟೆ ಉಸ್ತುವಾರಿ ಕೊಟ್ಟಿದ್ದರು. ಹತ್ತು ದಿನ ಬಾಗಲಕೋಟೆಯಲ್ಲಿ ಪ್ರಚಾರ ಮಾಡಿದ್ದೇನೆ. ಅಲ್ಲಿ ಸ್ಥಳೀಯವಾಗಿ ಏನಾಗಿದೆ ಎಂಬುದು ಗೊತ್ತಿಲ್ಲ. ಆದರೂ ಎರಡು ಕಡೆ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಎರಡು ಕಡೆಯಲ್ಲೂ ಅವರವರ ಕುಟುಂಬಕ್ಕೆ ಟಿಕೆಟ್ ಕೊಟ್ಟಿದ್ದೇವೆ.ಹಾಗಾಗಿ ನಾವು ಗೆಲ್ಲುತ್ತೇವೆ. ಮುಸ್ಲಿಂ ಮುಖಂಡರ ವಿಚಾರದಲ್ಲಿ ಆಗಿರುವ ಬೆಳವಣಿಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಯತೀಂದ್ರರನ್ನು ವಸೂಲಿಗೆ ರಾಜಕೀಯಕ್ಕೆ ತಂದಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಮನೆಯವರು ಎಲ್ಲರೂ ವಸೂಲಿಗೆ ನಿಂತಿದ್ರು ಅಂತಾ ನಾನೂ ಹೇಳ್ತೀನಿ ಅಂದರು.
ಕುಮಾರಸ್ವಾಮಿ ಅವರ ಬಳಿ ಯಾವುದು ದಾಖಲೆ ಇಲ್ಲ. ಆರೋಪ ಮಾಡೋಕೆ ಏನೂ ಇಲ್ಲ. ಹಾಗಾಗಿ ಏನೇನೋ ಮಾತಾಡ್ತಾರೆ. ನಮ್ಮ ತಂದೆಯವ್ರು ರಾಜಕಾರಣದಲ್ಲಿ ಸೋಲು ಗೆಲುವು ಎರಡನ್ನೂ ಕಂಡಿದ್ದಾರೆ,ಅಂತದ್ದರಲ್ಲಿ ಕಣ್ಣೀರು ಹಾಕೋ ಅವಶ್ಯಕತೆ ಅವ್ರಿಗೆ ಏನಿದೆ ಎಂದು ಪ್ರಶ್ನಿಸಿದರು.
ನಮ್ಮ ತಂದೆ ಮುಖ್ಯಮಂತ್ರಿ ಆಗಿರೋವರೆಗೂ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.
ಸಚಿವ ಸ್ಥಾನಕ್ಕೆ ಎಲ್ಲರೂ ಆಕಾಂಕ್ಷಿ ಇರ್ತಾರೆ. ಹೈಕಮಾಂಡ್ ಯಾರು ಸಚಿವರಾಗಬೇಕು ಅನ್ನೋದನ್ನ ತೀರ್ಮಾನ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಯತೀಂದ್ರ ಉತ್ತರಿಸಿದರು.

