ಮೈಸೂರು: ಬುಧವಾರ ಅಂದರೆ ಏಪ್ರಿಲ್.15ರಂದು ನಾಗಮಂಗಲದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ಅವರಿಗೆ ಮೈಸೂರು ಮಹಾರಾಜರ ಮಾದರಿ ಪೇಟವನ್ನು ಹಾಕಲಾಗುತ್ತದೆ.
ಅದಕ್ಕಾಗಿ ವಸ್ತ್ರ ವಿನ್ಯಾಸಕ ಹಾಗೂ ಕಲಾವಿದ ನಂದನ್ ಅವರು ಈ ವಿಶೇಷ ಪೇಟ ಸಿದ್ಧಪಡಿಸಿದ್ದಾರೆ.
ಐದು ದಿನಗಳ ನಿರಂತರ ಶ್ರಮದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಧರಿಸುತ್ತಿದ್ದ ಮಾದರಿ ಪೇಟ ತಯಾರಾಗಿದ್ದು, ಶುದ್ದ ಬನಾರಸ್ ಸಿಲ್ಕ್ ಬಟ್ಟೆ, ಮುತ್ತಿನ ಮಣಿಗಳು, ಗಂಡುಬೇರುಂಡ ಚಿತ್ರ ಬಳಸಿ ಅಚ್ಚುಕಟ್ಟಾಗಿ ತಯಾರಿಸಿದ್ದಾರೆ.
ಈ ಹಿಂದೆ ಒಮ್ಮೆ ನಂದನ್ ಅವರು ನರೇಂದ್ರ ಮೋದಿ ಅವರಿಗೆ ಕೆಂಪೇಗೌಡರ ಮಾದರಿ ಪೇಟ ತಯಾರಿಸಿ ಕೊಟ್ಟಿದ್ದರು. ಈಗ ಅವರಿಂದಲೇ ಮೈಸೂರು ಮಹಾರಾಜರ ಪೇಟ ತಯಾರಾಗಿರುವುದು ವಿಶೇಷ.
ಮಠದ ಭಕ್ತ ವೃಂದ ಮೈಸೂರು ಮಹಾರಾಜರ ಮಾದರಿ ಪೇಟವನ್ನು ನಾಳೆ ಪ್ರಧಾನಿ ಮೋದಿ ಅವರಿಗೆ ಹಾಕಲಿದ್ದಾರೆ.

