ಮೈಸೂರು: ನಗರದಲ್ಲಿರುವ ರೈಲ್ವೇ ಗೂಡ್ಸ್ ಶೆಡ್ ಅನ್ನು ಪಾಂಡವಪುರಕ್ಕೆ ಸ್ಥಳಾಂತರಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರು ಹುನ್ನಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಶೆಡ್ ಸ್ಥಳಾಂತರ ಪ್ರಕ್ರಿಯೆಗಳನ್ನು ನಡೆಸಿದರೆ, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮೈಸೂರು ಮಹಾರಾಜರು ನಿರ್ಮಿಸಿದ ರೈಲ್ವೆ ಗೂಡ್ಸ್ ಶೆಡ್ ಅನ್ನಯ ಮೈಸೂರಿನಿಂದ ಸ್ಥಳಾಂತರಿಸಲು ರಾಜವಂಸ್ಥರೇ ಆದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮತಿ ಸೂಚಿಸಿರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.
1882ರಲ್ಲಿ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡ ರೈಲ್ವೆ ಶೆಡ್ ಅನ್ನು ಸುಮಾರು 10 ಸಾವಿರ ಜನರು ಅವಲಂಬಿಸಿದ್ದಾರೆ. ಪ್ರತಿ ದಿನ 600ಕ್ಕೂ ಹೆಚ್ಚು ಟ್ರಕ್ ಲೋಡ್ ಮತ್ತು ಅನ್ ಲೋಡ್ ಆಗುತ್ತಿದೆ. ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ರೈಲ್ವೆ ಶೆಡ್‌ನಿಂದ ವಾರ್ಷಿಕ ಸುಮಾರು 4,900 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇಂತಹ ಶೆಡನ್ನು ಬೇರೆ ಜಿಲ್ಲೆಗೆ ಸ್ಥಳಾಂತರಿಸುವುದು ಎಷ್ಟು ಸರಿ ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಈಗಿರುವ ರೈಲ್ವೆ ಶೆಡ್ ಜಾಗದಲ್ಲಿ ವಂದೇ ಮಾತರಂ ರೈಲು ನಿಲುಗಡೆಗೆ ಅವಕಾಶ ಮಾಡಲು ಶೆಡ್ ಸ್ಥಳಾಂತರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಒಂದು ಟ್ರೇನ್ ನಿಲ್ಲಿಸಲು ಇಷ್ಟು ದೊಡ್ಡ ವ್ಯಾವಹಾರ ಕೇಂದ್ರವಾಗಿರುವ ಗೂಡ್ಸ್ ಶೆಡನ್ನು ಎಚ್.ಡಿ.ಕುಮಾರಸ್ವಾಮಿ ಮತ್ತು ಸೋಮಣ್ಣ ಇಬ್ಬರೂ ಸೇರಿ ಸ್ಥಳಾಂತರಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರದಿಂದ ಹೊಸದಾಗಿ ನಮಗೆ ಯೋಜನೆಗಳನ್ನು ತರುವುದನ್ನು ಬಿಟ್ಟು, ಇಲ್ಲಿರುವ ರೈಲ್ವೆ ಶೆಡನ್ನೇ ತಮ್ಮೂರಿಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಮುಂದೆ ಚಾಮುಂಡಿಬೆಟ್ಟನೂ ಸ್ಥಳಾಂತರಿಸಿಕೊಂಡರೆ ಮೈಸೂರಿನ ಜನ ಎಲ್ಲಿಗೆ ಹೋಗಬೇಕು ಎಂದು ಖಾರವಾಗಿ ಪ್ರಶ್ನಿಸಿದರು.
ಈಗಾಗಲೇ ಕೂಲಿ ಕಾರ್ಮಿಕರು, ಶೆಡ್ ಅವಲಂಬಿತ ವರ್ಗಗಳೊಂದಿಗೆ ಸಭೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ರೈಲ್ವೆ ನಿಲ್ದಾಣವನ್ನೇ ಬಂದ್ ಮಾಡಿ ಪ್ರತಿಭಟನೆಗೆ ಇಳಿಯುತ್ತೇವೆ ಎಂದು ಲಕ್ಷ್ಮಣ್ ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಮುಖಂಡರಾದ ಶಿವಣ್ಣ, ಬಿ.ಎಂ.ರಾಮು, ಗೋಪಿನಾಥ್, ಗಿರೀಶ್, ಮಹೇಶ್, ರಾಹುಲ್ ಉಪಸ್ಥಿತರಿದ್ದರು.

