(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಮದುವೆಯ ಸಂಭ್ರಮದ ನಡುವೆ ಆಭರಣ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಘರ್ಷಣೆ ನಡೆದು ಐದಾರು ಮಂದಿ
ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಈ ಘರ್ಷಣೆಯಲ್ಲಿ ವರನ ಸಹೋದರ,ವಧುವಿನ ತಂದೆ ಹಾಗೂ ಸೋದರ ಮಾವ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವರನ ಸಹೋದರರಾದ ಸಮೀರ್, ಸೋಯಬ್, ವರನ ಪಕ್ಕದ ಮನೆಯ ಆಯನ್, ವಧು ವಿನ ತಂದೆ ವಾಹೀದ್ ಹಾಗೂ ಸೋದರ ಮಾವ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಾಮಂದಿಗೇರಿಯ ಜಬೀವುಲ್ಲಾ ಎಂಬುವರ ಮಗ ಮುದಾಸಿರ್ ಹಾಗೂ ಆರ್. ಎಂ. ಕಲ್ಯಾಣ ಮಂಟಪ ಸಮೀಪದ ಬಡಾವಣೆ ನಿವಾಸಿ ವಾಹೀದ್ ಅಲಿಯಾಸ್ ಭಾಷಾ ಅವರ ಮಗಳು ಗುಲ್ ನಾಜ್ ಎಂಬುವರ ನಡುವೆ ವಿವಾಹ ನಿಶ್ಚಯವಾಗಿತ್ತು.
ಮಂಗಳವಾರ ಸಾಮಂದಿಗೇರಿಯಲ್ಲಿರುವ ವರನ ಮನೆಯಲ್ಲಿ ಅರಿಸಿನ ಶಾಸ್ತ್ರ ನಡೆದಿತ್ತು. ಇಂದು ಆರ್. ಎಂ. ಕಲ್ಯಾಣ ಮಂಟಪದಲ್ಲಿ ಈ ಜೋಡಿಗಳ ಮದುವೆ ನಿಗದಿಯಾಗಿತ್ತು.
ಮದುವೆ ಮಾತುಕತೆ ವೇಳೆ ವರನ ಕಡೆಯವರು ವಧುವಿಗೆ ನೆಕ್ಲೆಸ್( ಕಂಠಿಹಾರ) ವನ್ನು ವಧು ದಕ್ಷಿಣೆಯಾಗಿ ನೀಡುವಂತೆ ಒಪ್ಪಿಕೊಂಡಿದ್ದರು ಎಂದು ಹೇಳಲಾಗಿದೆ. ಆದರೆ ಇಂದು ಮದುವೆ ನಿಶ್ಚಯವಾಗಿದ್ದರಿಂದ ವರನ ಕಡೆಯವರು ಮದುವೆಗೆ ನೆಕ್ಲೆಸ್ ತೆಗೆದುಕೊಂಡು ಬಂದಿರಲಿಲ್ಲ.
ಇದರಿಂದ ಬೇಸರಗೊಂಡ ವಧು ನನಗೆ ಮದುವೆ ಬೇಡ ಎಂದು ನಿರಾಕರಿಸಿದ್ದಾಳೆ. ಇಂದು ಬೆಳಿಗ್ಗೆ ಕಲ್ಯಾಣ ಮಂಟಪದಲ್ಲಿ ಚಿನ್ನದ ಆಭರಣ ಕೊಡುವ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಮಾತುಕತೆ ಶುರುವಾಗಿದೆ. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಘರ್ಷಣೆ ನಡೆದು, ಎರಡೂ ಕಡೆ ಯವರು ಚಾಕುವಿನಿಂದ ಇರಿದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯಿಂದ ಗಾಯಗೊಂಡ ಇವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎಲ್ಲವೂ ಸರಿಯಾಗಿದ್ದರೆ ಪಟ್ಟಣದ ಕುರುಬನಕಟ್ಟೆ ರಸ್ತೆಯಲ್ಲಿರುವ ಆರ್. ಎಂ. ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯಬೇಕಿತ್ತು.
ಮದುವೆಯ ಸಂಭ್ರಮದಲ್ಲಿರಬೇಕಾಗಿದ್ದ ಎರಡು ಕುಟುಂಬಗಳು ಪರಸ್ಪರ ಬಡಿದಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.

