ಬೆಂಗಳೂರು: ಪ್ರತಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಈ ಕಡುಭ್ರಷ್ಟ ಆಡಳಿತಕ್ಕೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ.
ಒಂದೆಡೆ ನಮ್ಮ ಮಂಡ್ಯ, ಮೈಸೂರು ಭಾಗದ ರೈತರ ಜಮೀನುಗಳಿಗೆ, ಕೆರೆ-ನಾಲೆಗಳಿಗೆ ನೀರು ಬಿಡಲು ಬದ್ಧತೆ ಇಲ್ಲದ ನೀವು, ರಾತ್ರೋರಾತ್ರಿ ಕದ್ದುಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದೀರಿ. ಮತ್ತೊಂದೆಡೆ ಬಯಲುಸೀಮೆ ಜನರ ಕುಡಿಯುವ ನೀರಿನ ಬವಣೆ ತೀರಿಸಬೇಕಿದ್ದ ಎತ್ತಿನಹೊಳೆ ಯೋಜನೆಯಲ್ಲಿ ನಿಮ್ಮ ಸರ್ಕಾರದ ಕಮಿಷನ್ ದಂಧೆ, ಭ್ರಷ್ಟಾಚಾರದ ಫಲವಾಗಿ ಕಳಪೆ ಕಾಮಗಾರಿಯಿಂದ ಅಪಾರ ನೀರು ಅನ್ಯಾಯವಾಗಿ ಮಣ್ಣುಪಾಲಾಗುವಂತೆ ಮಾಡಿದ್ದೀರಿ ಎಂದು ಕಿಡಿಕಾರಿದ್ದಾರೆ.
ಬಯಲುಸೀಮೆಗೆ ನೀರು ಕೊಡುತ್ತೇವೆ ಎಂದು ಬಿಲ್ಡಪ್ ಕೊಟ್ಟ ನಿಮ್ಮ ನೀರಾವರಿ ಇಲಾಖೆಯ ಅಸಲಿ ಬಣ್ಣ ಈಗ ಬಯಲಾಗಿದೆ. ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯ 10 ಅಡಿ ಸುತ್ತಳತೆಯ ಬೃಹತ್ ಪೈಪ್‌ನ ವೆಲ್ಡಿಂಗ್ ತುಂಡಾಗಿ ಜಲಸ್ಫೋಟ ಸಂಭವಿಸಿದೆ.
ಭಾನುವಾರ ಸಂಜೆಯಾದರೂ ದುರಸ್ತಿ ಮಾಡಲಾಗದೆ ಕೋಟ್ಯಂತರ ಲೀಟರ್ ನೀರು ಗಗನಕ್ಕೆ ಚಿಮ್ಮಿ ವ್ಯರ್ಥವಾಗಿ ಪೋಲಾಗಿದೆ. ನೀರಾವರಿ ಮಂತ್ರಿಯೂ ಆಗಿರುವ ಸಿಎಂ ಅವರೇ, ನಿಮ್ಮ ಕಳಪೆ ಕಾಮಗಾರಿಯಿಂದಾಗಿ ಸುತ್ತಮುತ್ತಲಿನ ಭತ್ತದ ಗದ್ದೆಗಳು, ಅಡಿಕೆ ಮತ್ತು ಕಾಫಿ ತೋಟಗಳಿಗೆ ನೀರು ಹಾಗೂ ಮಣ್ಣು ನುಗ್ಗಿ ರೈತರ ಇಡೀ ವರ್ಷದ ಬೆಳೆ ಸರ್ವನಾಶವಾಗಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳೇ, ಬೆಂಗಳೂರಿನಲ್ಲಿ ಕುಳಿತು ಕಂಟ್ರಾಕ್ಟರ್ ಗಳ ಜೊತೆ, ರಿಯಲ್ ಎಸ್ಟೇಟ್ ದೊರೆಗಳ ಜೊತೆ, ಬಂಡವಾಳಶಾಹಿಗಳ ಜೊತೆ ಡೀಲ್ ಕುದುರಿಸಲು ಇರುವ ಸಮಯ, ನಮ್ಮ ರೈತರ ಕಣ್ಣೀರು ಒರೆಸಲು ಏಕಿಲ್ಲ ತಮಿಳುನಾಡಿಗೆ ನೀರು ಬಿಡುವಾಗ ಇರುವ ನಿಮ್ಮ ಬುಲೆಟ್ ವೇಗ, ಎತ್ತಿನಹೊಳೆಯ ಕಳಪೆ ಪೈಪ್‌ಲೈನ್ ದುರಸ್ತಿ ಮಾಡಲು ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದು ಕೇವಲ ತಾಂತ್ರಿಕ ದೋಷವಲ್ಲ, ನಿಮ್ಮ ಸರ್ಕಾರದ ಕಮಿಷನ್ ದಂಧೆಯ ನೇರ ಪರಿಣಾಮ. ಕೂಡಲೇ ಎತ್ತಿನಹೊಳೆ ಯೋಜನೆಯ ಕಳಪೆ ಕಾಮಗಾರಿ ಬಗ್ಗೆ ತನಿಖೆಗೆ ಆದೇಶಿಸಿ, ನಷ್ಟ ಅನುಭವಿಸಿದ ರೈತರಿಗೆ ಗರಿಷ್ಠ ಪರಿಹಾರ ನೀಡಬೇಕು ಎಂದು ಅಶೋಕ್ ಆಗ್ರಹಿಸಿದ್ದಾರೆ.

