ಗಾನ ನಿಲ್ಲಿಸಿದ ಗಾನ ಕೋಗಿಲೆ; ಎಸ್‌. ಜಾನಕಿ ವಿಧಿವಶ

ಖ್ಯಾತ ಗಾಯಕಿ ಎಸ್‌.ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೈಸೂರು: ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಪ್ರಖ್ಯಾತರಾದ ಪ್ರಸಿದ್ಧ ಗಾಯಕಿ ಎಸ್.ಜಾನಕಿ ವಿಧಿವಶರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ವೇಳೆಯೇ ಅವರಿಗೆ ಹೃದಯಸ್ಥಂಬನ ವಾಗಿ ಅವರು ಮೃತಪಟ್ಟಿದ್ದಾರೆ.
ಅವರಿಗೆ 88 ವರ್ಷ ವಯಸ್ಸಾಗಿತ್ತು.

ಎಸ್ ಜಾನಕಿ ಅವರು ಮೈಸೂರಿನಲ್ಲಿ ವಾಸವಿದ್ದರು, ಅವರ ಆರೋಗ್ಯವನ್ನು ನವೀನ್ ಎಂಬ ಕೇರ್ ಟೇಕರ್ ನೋಡಿಕೊಳ್ಳುತ್ತಿದ್ದರು. ಇಂದು ಸಂಜೆ ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗಿದ್ದು,ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದಾರೆ.

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದ ಎಸ್. ಜಾನಕಿ, ತಮ್ಮ ಮೂರನೆಯ ವಯಸ್ಸಿನಲ್ಲೇ ನಾದಸ್ವರ ವಿದ್ವಾನ್ ಶ್ರೀ ಪೈದಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು.

1957ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ. ಚಲಪತಿ ರಾವ್ ಅವರ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ ಜಾನಕಿ ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದು ಸತತವಾಗಿ ಬರಲು ಪ್ರಾರಂಭವಾದವು.

ಜಾನಕಿ ಅವರು ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ.ಹಾಗಾಗಿ ಅವರು ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಪ್ರಖ್ಯಾತರು.

ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದರು. ಜೊತೆಗೆ ಹಿಂದಿ ಚಲನಚಿತ್ರದಲ್ಲೂ ಹಾಡಿದ್ದಾರೆ.

ದೀಪವು ನಿನ್ನದೆ, ಗಾಳಿಯೂ ನಿನ್ನದೆ, ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ’, ‘ಯುಗ ಯುಗಾದಿ ಕಳೆದರೂ’, ‘ಹೇಳೇ ಗೆಳತಿ, ಬಾನಲ್ಲು ನೀನೆ ಭುವಿಯಲ್ಲು ನೀನೆ’, ‘ಬಿಸಿಲಾದರೇನು ಮಳೆಯಾದರೇನು’ಗಗನವು ಎಲ್ಲೋ ಭೂಮಿಯು ಎಲ್ಲೋ, ಸೋಲೆ ಇಲ್ಲ,ಇಂತಹ ಸಾವಿರಾರು ಸುಮಧುರ ಕನ್ನಡ ಗೀತೆಗಳಿಗೆ ಅವರು ದನಿಯಾಗಿ ಜನಮನ ಸೂರೆಗೊಂಡಿದ್ದರು.

ಎಸ್. ಜಾನಕಿ ಅವರಿಗೆ ಹಲವು ರಾಷ್ಟ್ರಪ್ರಶಸ್ತಿಗಳು ಸಂದಿವೆ.ವಿವಿಧ ರಾಜ್ಯಗಳ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಸನ್ಮಾನಿಸಿತ್ತು.

ಇತ್ತೀಚಿನ ವರ್ಷದಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ, ಎಸ್. ಜಾನಕಿಯವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದನ್ನು ಸ್ಮರಿಸಬಹುದು.

ಎಸ್ ಜಾನಕಿ ಅವರು ಮಧ್ಯಾಹ್ನ 12.30 ಕ್ಕೆ ಅಪೊಲೊ ಆಸ್ಪತ್ರೆಗೆ ಬಂದರು.ಬರುವಾಗಲೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.ಹೃದಯ ಸ್ಥಂಬನವಾಗಿತ್ತು.ಸಂಜೆ.7.30ಕ್ಕೆ ನಿಧನರಾದರು ಎಂದು ಆಸ್ಪತ್ರೆ ‌ವೈದ್ಯರು ಸ್ಪಷ್ಪಪಡಿಸಿದ್ದಾರೆ.