ಮೈಸೂರು: ಭಾರತೀಯ ಚಿತ್ರಸಂಗೀತ ಲೋಕದ ಗಾನ ಕೋಗಿಲೆ ಎಸ್. ಜಾನಕಿ ಅವರು ಪಂಚಭೂತಗಳಲ್ಲಿ ಲೀನವಾದರು.
ಇಂದು ಮೈಸೂರಿನ ಬೋಗಾದಿ ಬಳಿಯ ಕನಿಯನಹುಂಡಿ ತೋಟದ ಮನೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಕ್ರಿಯೆಗೆ ಚಾಲನೆ ನೀಡಲಾಯಿತು.
ಮೊಮ್ಮಗಳು ಅಗ್ನಿ ಸ್ಪರ್ಶ ಮಾಡುವ ಮೂಲಕ ವಿಧಿವಧಾನ ನೆರವೇರಿಸಿದರು.ಇಲ್ಲಿಗೆ ಜಾನಕಿ ಅವರ
ಐದು ದಶಕಗಳ ಸಂಗೀತ ಪ್ರಯಾಣಕ್ಕೆ ಭಾವನಾತ್ಮಕ ತೆರೆ ಬಿದ್ದಿತು.
ಜನಾಕಮ್ಮ ಅವರ ಅಂತಿಮ ದರ್ಶನ ಪಡೆಯಲು ಮಹಾರಾಜ ಕಾಲೇಜು ಮೈದಾನದಲ್ಲಿ ಜನಸಾಗರವೇ ಸೇರಿತ್ತು.
ಬೆಳಿಗ್ಗೆ 9 ಗಂಟೆಯಿಂದ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಎಸ್. ಜಾನಕಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. “ಒಮ್ಮೆ ನೋಡಬೇಕು” ಎಂಬ ಅಭಿಮಾನಿಗಳ ಹಂಬಲಕ್ಕೆ ಕಡಿವಾಣವೇ ಇರಲಿಲ್ಲ. ಮೈದಾನದ ಸುತ್ತಲೂ ಸಾವಿರಾರು ಜನರ ಸಾಲು ಕಂಡುಬಂತು. ಬೆಳಗ್ಗಿನಿಂದ ಸಂಜೆಯವರೆಗೂ ಅಭಿಮಾನಿಗಳ ಸಾಗರ ಹರಿದುಬಂದಿತು.ಎಲ್ಲೆಲ್ಲೂ ಜಾನಕಮ್ಮ ಜಯಕಾರ ಹಾಕಿ ಕಣ್ಣೀರ ತರ್ಪಣ ಅರ್ಪಿಸಿದರು.
ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ಗಣ್ಯರು, ಹಿರಿಯ ಕಲಾವಿದರು, ಸಂಗೀತ ನಿರ್ದೇಶಕರು, ರಾಜಕೀಯ ಮುಖಂಡರು ಆಗಮಿಸಿ ಹೂವಿನ ಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಹಲವು ಅಭಿಮಾನಿಗಳು ಜಾನಕಿ ಅವರ ಹಾಡುಗಳನ್ನು ಹಾಡುತ್ತಾ, ಕಣ್ಣೀರಿಡುತ್ತಾ ವಿದಾಯ ಹೇಳಿದ ದೃಶ್ಯ ಮನಕಲುಕುವಂತಿತ್ತು.
ಭದ್ರತೆಗಾಗಿ 700ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಬ್ಯಾರಿಕೇಡ್ ಹಾಕಿ ವ್ಯವಸ್ಥಿತವಾಗಿ ಸಾಲುಗಳನ್ನು ನಿರ್ಮಿಸಿ ಜನತೆಗೆ ಗಾನಕೋಗಿಲೆಯ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಹೂವಿನ ಮಳೆ, ಜಯಘೋಷ
ಸಾರ್ವಜನಿಕ ದರ್ಶನದ ಬಳಿಕ ಮಧ್ಯಾಹ್ನ ಪಾರ್ಥಿವ ಶರೀರವನ್ನು ಹೂಗಳಿಂದ ಅಲಂಕರಿಸಿದ ವಾಹನದಲ್ಲಿ ಮೆರವಣಿಗೆಯ ಮೂಲಕ ಕನಿಯನಹುಂಡಿ ತೋಟದ ಮನೆಗೆ ಕೊಂಡೊಯ್ಯಲಾಯಿತು.
ದಾರಿಯುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆ ಸುರಿಸಿ, “ಗಾನ ಕೋಗಿಲೆ ಅಮರ” ಎಂಬ ಘೋಷಣೆಗಳನ್ನು ಕೂಗಿದರು.
ಕನಿಯನಹುಂಡಿಯಲ್ಲಿರುವ ಎಸ್. ಜಾನಕಿ ಅವರ ತೋಟದ ಮನೆಯಲ್ಲಿ ಕುಟುಂಬಸ್ಥರು, ಬಂಧುಗಳು ಹಾಗೂ ಆಪ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ವೇದಘೋಷ, ಮಂತ್ರಪಠಣದ ನಡುವೆ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸ್ ತುಕಡಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ 21 ಗುಂಡಿನ ಸೆಲ್ಯೂಟ್ ಗುಂಡಿನ ಸದ್ದು ಮೈದಾನದಲ್ಲಿ ಪ್ರತಿಧ್ವನಿಸಿತು.
ಈ ಭಾವನಾತ್ಮಕ ಕ್ಷಣದಲ್ಲಿ ಎಸ್. ಜಾನಕಿ ಅವರ ಮೊಮ್ಮಗಳು ಮುಂದೆ ಬಂದು ಅಗ್ನಿ ಸ್ಪರ್ಶ ಮಾಡಿದರು. ಕುಟುಂಬದ ಪರವಾಗಿ ಅವರು ಕೊನೆಯ ಕರ್ತವ್ಯ ನಿರ್ವಹಿಸಿದರು. ಈ ವೇಳೆ ಕುಟುಂಬಸ್ಥರು ಹಾಗೂ ಅಲ್ಲಿದ್ದ ಸಾವಿರಾರು ಜನರ ಕಣ್ಣುಗಳು ತುಂಬಿ ಬಂದವು.

