ಬೆಂಗಳೂರು: ಟೈಪ್-1 ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಪುಟ್ಟ ಮಕ್ಕಳ ಜೀವ ರಕ್ಷಕ ‘ಉಚಿತ ಇನ್ಸುಲಿನ್ ಯೋಜನೆ’ಯನ್ನು ಘೋಷಿಸಿ ನಾಲ್ಕೈದು ತಿಂಗಳಾದರೂ ಜಾರಿಗೆ ತರದ ನಿರ್ದಯಿ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರತಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ,
ಬಜೆಟ್‌ನಲ್ಲಿ ಜನಪ್ರಿಯತೆಗಾಗಿ ಸುಳ್ಳು ಘೋಷಣೆಗಳನ್ನು ಕೂಗಿ, ಪತ್ರಿಕೆಗಳಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿಕೊಂಡು ಈಗ ಮಕ್ಕಳ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದೀರಾ ಎಂದು ಟ್ವೀಟ್ ಮಾಡಿ ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಮಾರಕೃಪಾದಲ್ಲಿ ಕೂತು ಕಮಿಷನ್ ಲೆಕ್ಕಾಚಾರ ಮಾಡುವುದರಲ್ಲಿ ಬ್ಯುಸಿಯಾಗಿರುವ ನಿಮಗೆ, ಇನ್ಸುಲಿನ್‌ಗಾಗಿ ತಿಂಗಳಿಗೆ 2 ರಿಂದ 5 ಸಾವಿರ ರೂಪಾಯಿ ಖರ್ಚು ಮಾಡಲಾರದೆ ಕಣ್ಣೀರು ಹಾಕುತ್ತಿರುವ ಬಡ ಮತ್ತು ಮಧ್ಯಮ ವರ್ಗದ ಪೋಷಕರ ಆಕ್ರಂದನ ಕೇಳಿಸುವುದಾದರೂ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ’ದ ಅಧಿಕಾರಿಗಳ ಘೋರ ನಿರ್ಲಕ್ಷ್ಯ ಮತ್ತು ಟೆಂಡರ್ ಪ್ರಕ್ರಿಯೆಯ ವಿಳಂಬದಿಂದಾಗಿ ಇಡೀ ಯೋಜನೆ ಹಳ್ಳ ಹಿಡಿದಿದೆ. ನಿಮಗೆ ಸಚಿವರ ಮೇಲೆ, ಅಧಿಕಾರಿಗಳ ಮೇಲೆ, ಆಡಳಿತದ ಮೇಲೆ ಹಿಡಿತವೇ ಇಲ್ಲವೇ ಮುಖ್ಯಮಂತ್ರಿಗಳೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ
ರಾಜ್ಯದಲ್ಲಿ ಅಂದಾಜು 7,000ಕ್ಕೂ ಹೆಚ್ಚು ಟೈಪ್-1 ಮಧುಮೇಹ ಬಾಧಿತ ಮಕ್ಕಳು ಇನ್ಸುಲಿನ್ ಸಿಗದೆ ತತ್ತರಿಸುತ್ತಿದ್ದಾರೆ. ಕಡು ಬಡವರು ಹಣವಿಲ್ಲದೆ ತಮ್ಮ ಮಕ್ಕಳಿಗೆ ಕಡಿಮೆ ಪ್ರಮಾಣದ ಇನ್ಸುಲಿನ್ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಆ ಮಕ್ಕಳಿಗೆ ಹೆಚ್ಚು ಕಡಿಮೆಯಾಗಿ ಪ್ರಾಣಾಪಾಯವಾದರೆ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಹಾಗೂ ಕಿಡ್ಸ್ ಸಂಸ್ಥೆಗಳಲ್ಲಿ ಸಾವಿರಾರು ಮಕ್ಕಳು ನೋಂದಾಯಿಸಿ ಕೊಂಡಿದ್ದರೂ, ಸರ್ಕಾರದಿಂದ ಇನ್ಸುಲಿನ್ ಪೂರೈಕೆಯಾಗಿಲ್ಲ, ಕೊನೆಗೆ ಎನ್‌ಜಿಒಗಳ ನೆರವು ಪಡೆಯುವ ದರಿದ್ರ ಸ್ಥಿತಿಗೆ ಸರ್ಕಾರಿ ಆಸ್ಪತ್ರೆಗಳು ಬಂದು ನಿಂತಿವೆ ಎಂದು ಅಶೋಕ್ ಛೀಮಾರಿ ಹಾಕಿದ್ದಾರೆ.
ಸಿಎಂ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಆಂತರಿಕ ರಾಜಕೀಯ ಹಗ್ಗಜಗ್ಗಾಟ, ಖಾತೆ ಹಂಚಿಕೆಯ ಗೊಂದಲ ಹಾಗೂ ಅಧಿಕಾರಿಗಳ ಮೇಲಿನ ನಿಯಂತ್ರಣದ ಕೊರತೆಯಿಂದಾಗಿ ಬಡವರ ಮಕ್ಕಳು ಸಾಯಬೇಕೇ?, ತಕ್ಷಣವೇ ಟೆಂಡರ್ ಪ್ರಕ್ರಿಯೆ ಮುಗಿಸಿ, ಉಚಿತ ಇನ್ಸುಲಿನ್ ವಿತರಣೆ ಆರಂಭಿಸಿ ಎಂದು ಪ್ರತಿಪಕ್ಷ ನಾಯಕ ತಾಕೀತು ಮಾಡಿದ್ದಾರೆ.

