ಬೆಂಗಳೂರು,ಜು.2: ಕರ್ನಾಟಕದಲ್ಲಿ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅನ್ನದಾತನಿಗೆ ನೆಮ್ಮದಿಯೇ ಇಲ್ಲದಂತಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ರೈತರ ಹೊಟ್ಟೆಗೆ ಹೊಡೆದು, ಅವರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವ ಈ ದರಿದ್ರ ಸರ್ಕಾರ, ತನ್ನ ಅನ್ಯಾಯವನ್ನು ಪ್ರಶ್ನಿಸಿದ ಅಮಾಯಕ ರೈತರು ಹಾಗೂ ಮಹಿಳಾ ಹೋರಾಟಗಾರರ ಮೇಲೆ ಪೊಲೀಸರನ್ನು ಬಿಟ್ಟು ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೇಕಲ್‌ನಲ್ಲಿ ನಡೆದದ್ದು ಕೇವಲ ಲಾಠಿ ಪ್ರಹಾರವಲ್ಲ, ಅದು ಪ್ರಜಾಪ್ರಭುತ್ವದ ಕಗ್ಗೊಲೆ,ಸರ್ಜಾಪುರ ಹೋಬಳಿಯ 11 ಹಳ್ಳಿಗಳ ರೈತರು ತಮ್ಮ ಭೂಮಿ ಉಳಿಸಿಕೊಳ್ಳಲು ಕಳೆದ 400 ದಿನಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವುದು ಈ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಬುಧವಾರ ಕೆಐಡಿಬಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ 600ಕ್ಕೂ ಹೆಚ್ಚು ರೈತರನ್ನು ಮಡಿವಾಳ ಚೆಕ್ ಪೋಸ್ಟ್ ಬಳಿ ತಡೆದು, ಬಲವಂತವಾಗಿ ವಶಕ್ಕೆ ಪಡೆಯಲು ಮುಂದಾದಾಗ ಪೊಲೀಸರು ನಡೆಸಿದ ದೌರ್ಜನ್ಯ ಖಂಡನೀಯ ಎಂದು ಪ್ರತಿಪಕ್ಷ ನಾಯಕ ಹೇಳಿದ್ದಾರೆ.
ಈ ದೌರ್ಜನ್ಯದ ವೇಳೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡು, 20 ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ. ಹೆಣ್ಣುಮಕ್ಕಳನ್ನು, ವೃದ್ಧ ತಾಯಂದಿರನ್ನು ರಸ್ತೆಯಲ್ಲಿ ಎಳೆದಾಡಿ ಅಮಾನವೀಯವಾಗಿ ಹೊಡೆಯಲಾಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಸಿಟಿ ನಿರ್ಮಾಣದ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ರೈತರ ಫಲವತ್ತಾದ ಜಮೀನನ್ನು ಧಾರೆ ಎರೆಯಲು ಯಾರಿಂದ ಕಮಿಷನ್ ಪಡೆದಿದ್ದೀರಿ,
ಗ್ಯಾರೆಂಟಿ ಅಂತ ಹೇಳಿ ಅಧಿಕಾರಕ್ಕೆ ಬಂದು, ಈಗ ಹಗಲು-ರಾತ್ರಿ ಕಷ್ಟಪಟ್ಟು ಅನ್ನ ಕೊಡುವ ರೈತರ ಮೇಲೆ ಬೂಟುಗಾಲಿನಿಂದ ತುಳಿಯುವುದು, ಲಾಠಿಯಿಂದ ಬಡಿಯುವುದೇ ನೀವು ಕೊಡುವ ಆರನೇ ಗ್ಯಾರೆಂಟಿನಾ ಉತ್ತರಿಸಿ ಎಂದು ಮುಖ್ಯ ಮಂತ್ರಿಗಳನ್ನು ಅಶೋಕ್ ಆಗ್ರಹಿಸಿದ್ದಾರೆ.
ರೈತರ ಮೇಲಿನ ಈ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಿ, ಆನೇಕಲ್‌ನ ಸರ್ಜಾಪುರ ಭಾಗದ ರೈತರ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಈ ಕೂಡಲೇ ಕೈಬಿಡಬೇಕು.
ಅಮಾಯಕ ರೈತರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಮತ್ತು ಅದಕ್ಕೆ ಆದೇಶ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು,
ಗಾಯಗೊಂಡ ಹಾಗೂ ಅನಾರೋಗ್ಯಕ್ಕೆ ಒಳಗಾದ ಪ್ರತಿಭಟನಾಕಾರರಿಗೆ ಸರ್ಕಾರವೇ ಸಂಪೂರ್ಣ ವೈದ್ಯಕೀಯ ವೆಚ್ಚ ಮತ್ತು ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಪ್ರತಿಪಕ್ಷ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

