ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮಹಾದ್ರೋಹ-ಅಶೋಕ್ ಟೀಕೆ

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿ, ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ ಭೀಕರ ಪರಿಸ್ಥಿತಿ ಇದೆ,
ಆದರೆ ಈ ಕಳ್ಳ ಸರ್ಕಾರ ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ‌ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್‌ ಟೀಕಿಸಿದ್ದಾರೆ.

ಈ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನತೆಗೆ ಮೋಸ ಮಾಡಿ,ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಿದೆ ಎಂದು ಟ್ವೀಟ್ ಮಾಡಿ ಅಶೋಕ್ ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಡಿಯುವ ನೀರಿನ ನೆಪವೊಡ್ಡಿ ಕಾವೇರಿ ಕೊಳ್ಳದ ಜೀವನಾಡಿ ಕೆ ಆರ್ ಎಸ್ ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಲಾಗುತ್ತಿದೆ.

ಕಳೆದ ಮೂರು ದಿನಗಳಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಿ ಕನ್ನಡಿಗರ ಬೆನ್ನಿಗೆ ಚುಚ್ಚುತ್ತಿರುವ ಚೂರಿಯಲ್ಲದೆ ಮತ್ತಿನ್ನೇನು ಮುಖ್ಯಮಂತ್ರಿಗಳೇ‌ ಎಂದು ಅಶೋಕ್ ಕಾರವಾಗಿ ಪ್ರಶ್ನಿಸಿದ್ದಾರೆ.

ಅಧಿಕಾರವಿಲ್ಲದಾಗ ನಮ್ಮ ನೀರು ನಮ್ಮ ಹಕ್ಕು ಅಂತ ನಾಟಕದ ಬೊಬ್ಬೆ ಹೊಡೆಯುತ್ತಾರೆ,ಅಧಿಕಾರ ಸಿಕ್ಕಾಗ ನಮ್ಮ ನೀರು ತಮಿಳುನಾಡಿನ ಹಕ್ಕು ಅಂತ ಅಧಿಕಾರಕ್ಕಾಗಿ ತಮಿಳುನಾಡಿನ ಎದುರು ಸಂಪೂರ್ಣ ಶರಣಾಗತಿ ಆಗುವುದು. ನಾಡಿನ ಜನತೆಯ ಹಿತ ಕಾಯದೆ ಹೈಕಮಾಂಡ್ ಅಣತಿಯಂತೆ ತುಳುನಾಡಿನ ಜೊತೆ ರಾಜಿ ಮಾಡಿಕೊಳ್ಳುವುದು ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

ಕೇವಲ ರಾಜಕೀಯ ಮೈತ್ರಿಗಾಗಿ, ಅಧಿಕಾರದ ಆಸೆಗಾಗಿ ಅಂದು ಡಿಎಂಕೆ,ಇಂದು ಟಿವಿಕೆ ಜೊತೆ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಪದೇ ಪದೇ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರ ಹಿತಕ್ಕಿಂತ ಅಧಿಕಾರದ ಸ್ವಾರ್ಥವೇ ಹೆಚ್ಚಾಯಿತೇ ಎಂದಿದ್ದಾರೆ.

ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಮೇಕೆದಾಟು ಹೆಸರಿನಲ್ಲಿ ಪಾದಯಾತ್ರೆಯ ಬೀದಿನಾಟಕ ಮಾಡಿದ್ದಿರಲ್ಲ ಸ್ವಾಮಿ ಡಿ.ಕೆ.ಶಿವಕುಮಾರ್ ಅವರೇ, ಈಗ ಯಾವ ಯಾತ್ರೆ ಮಾಡುತ್ತೀರಿ, ನೀರಿಲ್ಲದೆ, ಬೆಳೆಯಿಲ್ಲದೆ ಕಾವೇರಿ ಕೊಳ್ಳದ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಂಡರೆ ಅವರ ಶವಯಾತ್ರೆ ಮಾಡ್ತೀರಾ ಬೆಂಗಳೂರಿನ ಜನ ಟ್ಯಾಂಕರ್ ಮಾಫಿಯಾ ಸುಲಿಗೆಗೆ ಸಿಕ್ಕಿ ಪರದಾಡಿದರೆ ಟ್ಯಾಂಕರ್ ಯಾತ್ರೆ ಮಾಡುತ್ತೀರಾ ಎಂದು ಖಾರವಾಗಿ ಕುಟುಕಿದ್ದಾರೆ.