ಕಾಂಗ್ರೆಸ್ ಸರ್ಕಾರದ ಲೂಟಿಗೆ ಕೊನೆಯಿಲ್ಲ:ಅಶೋಕ್ ಟೀಕಾ ಪ್ರಹಾರ

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಲೂಟಿಗೆ ಕೊನೆಯಿಲ್ಲ, ಹಗರಣಗಳ ಸರಮಾಲೆಗೆ ಅಂತ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾ ಪ್ರಹಾರ ನಡೆಸಿದ್ದಾರೆ.

ದಿನಕ್ಕೊಂದು ಹಗರಣ, ದಿನಕ್ಕೊಂದು ಲೂಟಿಯ ನಗ್ನ ದರ್ಶನ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಯೊಂದು ಇಲಾಖೆಯೂ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ ಎಂದು ‌ಅಶೋಕ‌ ಟ್ವೀಟ್ ಮಾಡಿ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾ ವರದಿಯಲ್ಲಿ ಬಹಿರಂಗವಾಗಿರುವಂತೆ, ಅಬಕಾರಿ ಇಲಾಖೆಯಲ್ಲಿ ಲಂಚ ವಸೂಲಿಗಾಗಿಯೇ ಕಾಂಗ್ರೆಸ್ ಸರ್ಕಾರ ಸಂಘಟಿತ ಸಿಂಡಿಕೇಟ್ ಒಂದನ್ನು ಮುನ್ನಡೆಸುತ್ತಿರುವುದನ್ನು ಜಾರಿ ನಿರ್ದೇಶನಾಲಯ ಎಳೆಎಳೆಯಾಗಿ ಬಯಲಿಗೆಳೆದಿದೆ ಎಂದು ಗುಡುಗಿದ್ದಾರೆ.

ಇದು ಕೇವಲ ಭ್ರಷ್ಟಾಚಾರವಲ್ಲ, ಸರ್ಕಾರದ ಪ್ರಭಾವಿಗಳ ಆಶೀರ್ವಾದದೊಂದಿಗೆ ನಡೆಯುತ್ತಿರುವ ವ್ಯವಸ್ಥಿತ ದರೋಡೆ ಎಂದು ಕುಟುಕಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸ್ವಂತ ಭಾವ, ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ. ಮಂಜುನಾಥ್ ಮತ್ತು ಅವರ ಸಹಚರರ ಕಡೆಯಿಂದಲೇ 13.3 ಕೋಟಿ ಮೌಲ್ಯದ ಕಪ್ಪು ಹಣ, ಚಿನ್ನ ಪತ್ತೆಯಾಗಿದೆ,

ಯಾರಿಂದ ಎಷ್ಟು ಕಲೆಕ್ಷನ್ ಆಗಿದೆ, ಆ ಹಣ ಯಾರಿಗೆಲ್ಲ ತಲುಪಿದೆ ಎಂಬ ಇಂಚಿಂಚು ಮಾಹಿತಿಯಿರುವ ‘ರಹಸ್ಯ ಲಂಚದ ಪುಸ್ತಕ’ ಈಗ ಇ.ಡಿ ಅಧಿಕಾರಿಗಳ ಕೈಸೇರಿದೆ,

ಅಧಿಕಾರಿಗಳೇ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಹೆಸರಿನಲ್ಲಿ ಬೇನಾಮಿ ಲೈಸೆನ್ಸ್ ಪಡೆದು ಇಡೀ ವ್ಯವಸ್ಥೆಯನ್ನು ನುಂಗಿ ನೀರು ಕುಡಿಯುತ್ತಿದ್ದಾರೆ ಎಂದು ಅಶೋಕ್ ಸರ್ಕಾರದ ವಿರುದ್ಧ ಆರೋಪಗಳನ್ನು ಎಳೆ,ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈ ‘ರಹಸ್ಯ ಪುಸ್ತಕ’ದಲ್ಲಿ ದಾಖಲಾಗಿರುವ ಹಣದ ಪಾಲಿನಲ್ಲಿ ನಿಮ್ಮ ಪಾಲೂ ಸೇರಿದೆಯೇ,
ತಿಂಗಳ ಕಮಿಷನ್ ದಂಧೆಯ ಹಣ ದೆಹಲಿ ಹೈಕಮಾಂಡ್‌ಗೆ ತಲುಪುತ್ತಿದ್ದೆಯೇ,
ರಾಜ್ಯದ ಜನತೆಯ ರಕ್ತ ಹಿರುವ ಈ ಸಂಘಟಿತ ಸಿಂಡಿಕೇಟ್‌ನ ಅಸಲಿ ಪಿತಾಮಹ ಯಾರು,
ನಿಮ್ಮ ಸರ್ಕಾರದ ಒಂದೊಂದೇ ಇಲಾಖೆಯ ಲೂಟಿ ಬಯಲಾಗುತ್ತಿದ್ದರೂ ಇನ್ನು ಎಷ್ಟು ದಿನ ಮೌನವಾಗಿರುತ್ತೀರಿ ಎಂದು ಅಶೋಕ್ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಗೆ ಪ್ರಶ್ನೆಗಳನ್ನು ಹೇಳಿದ್ದಾರೆ.

ಕರ್ನಾಟಕದ ಜನತೆ ನಿಮ್ಮ ಈ ಕಮಿಷನ್ ಆಡಳಿತವನ್ನು ಎಂದಿಗೂ ಕ್ಷಮಿಸುವುದಿಲ್ಲ. ತಕ್ಷಣವೇ ಈ ಹಗರಣವನ್ನು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಅಥವಾ ಸಿಬಿಐಗೆ ವಹಿಸಿ ಎಂದು ಅಶೋಕ್ ಆಗ್ರಹಿಸಿದ್ದಾರೆ.