ಬೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗೆ ಕಾಯುತ್ತೇನೆ-ಹೆಚ್.ಡಿ.ಕೆ

ಬೆಂಗಳೂರು: ಬಿಡದಿಯ ಭಾಧಿತ ರೈತರ ಹಿತಾಸಕ್ತಿಯ ಬಗ್ಗೆ ಚರ್ಚಿಸಲು ನಾನು ಜೂನ್ 27 ರ ಶನಿವಾರ ಭೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗೆ ಕಾಯುತ್ತೇನೆ. ಅವರು ಸ್ಥಳಕ್ಕೆ ಬಂದರೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿಗಳ ಜತೆ ಪತ್ರ ಸಮರ ಅಂತೇನಿಲ್ಲ. ವಿಧಾನಸೌಧಕ್ಕೆ ಬರುವಂತೆ ಅವರು ಪತ್ರ ಬರೆದಿದ್ದರು. ವಿಧಾನಸೌಧ ಬೇಡ, ಭೈರಮಂಗಲದಲ್ಲಿ ನೊಂದ ರೈತರ ಸಮ್ಮುಖದಲ್ಲಿಯೇ ಚರ್ಚೆ ನಡೆಯುವುದು ಸೂಕ್ತ ಎಂದು ನಾನು ಪತ್ರದಲ್ಲಿ ತಿಳಿಸಿದ್ದೆ. ಅಲ್ಲದೆ, ಜೂನ್ 27ರಂದು ಬಿಡದಿಯ ಭೈರಮಂಗಲದಲ್ಲಿ ಬಹಿರಂಗ ಚರ್ಚೆಗೆ ಬರುತ್ತೇನೆ ಎಂದು ಹೇಳಿದ್ದೆ. ಅದರಂತೆ ನಾನು ಭೈರಮಂಗಲಕ್ಕೆ ತೆರಳಿ ಮುಖ್ಯಮಂತ್ರಿಗಳಿಗೆ ಕಾಯುತ್ತೇನೆ. ಅವರು ಬಂದರೆ ಚರ್ಚೆ ನಡೆಸುತ್ತೇನೆ ಎಂದು ಹೇಳಿದರು.

ಶನಿವಾರ ಮಧ್ಯಾಹ್ನದವರೆಗೂ ನಾನು ಬೈರಮಂಗಲದಲ್ಲಿ ಮುಖ್ಯಮಂತ್ರಿಗಳಿಗಾಗಿ ಕಾಯುತ್ತೇನೆ. ಅವರು ಬಂದರೆ ಸಂತೋಷ. ಚರ್ಚೆಗೆ ಬನ್ನಿ ಎಂದು ಪತ್ರ ಬರೆದಿದ್ದೇನೆ. ಅವರು ಇನ್ನೂ ಏನು ಉತ್ತರ ಕೊಟ್ಟಿಲ್ಲ. ನಾವೇನು ಗಲಾಟೆ ಮಾಡಿಸಲು ಹೋಗುತ್ತಿಲ್ಲ. ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಕೊಡುತ್ತಿದ್ದೇವೆ ಅಷ್ಟೇ. ನಾನು ಕೊಟ್ಟ ಸಮಯಕ್ಕೆ ಹೋಗುತ್ತಿದ್ದೇನೆ. ಅವರು ಬಂದರೆ ಒಳ್ಳೆಯದು. ನಿನ್ನೆಯಿಂದ ಹದಿನೈದು ಇಪ್ಪತ್ತು ಜನ ಭೂಮಿ ಕೊಡಲು ಸಿದ್ದ ಅಂತ ಕೂತಿದ್ದಾರೆ. ಇದರ ಹಿಂದಿನ ವಿಚಾರಗಳನ್ನು ನಾನೂ ಅರ್ಥ ಮಾಡಿಕೊಂಡಿದ್ದೇನೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನಿಲ್ಲ. ರೈತರು ಭೂಮಿ ಕೊಡಲು ಒಪ್ಪಿದರೆ ನನ್ನ ತಕರಾರು
ಇಲ್ಲ,ಬಲವಂತವಾಗಿ ರೈತರನ್ನು ಬೆದರಿಸಿದರೆ ಸರಿ ಇರೋದಿಲ್ಲ ಎಂದು ಹೆಚ್ ಡಿ ಕೆ ಕಠಿಣವಾಗಿ ಹೇಳಿದರು.

ನಾನು ಕೂಡ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಅನೇಕ ಸಂದರ್ಭಗಳಲ್ಲಿ ರೈತರ ಬಳಿಯೇ ಹೋಗಿದ್ದೇನೆ. ಇದೇ ಬಿಡದಿ ಯೋಜನೆ ಪ್ರಶ್ನೆ ಬಂದಾಗ ರೈತರನ್ನು ಕೃಷ್ಣಾ ಕಚೇರಿಗೆ ಕರೆಸಿಕೊಂಡು ಅವರ ಸಮ್ಮುಖದಲ್ಲಿಯೇ ಸಭೆ ಮಾಡಿದ್ದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರೇ ಬಿಡದಿ ಉಪನಗರ ಯೋಜನೆಯನ್ನು ವಿರೋಧ ಮಾಡಿದ್ದರು. ರೈತರು ಬೇಡ ಎಂದರೂ ಕಾಂಗ್ರೆಸ್ ನಾಯಕರಿಗೆ ಯೋಜನೆ ಬೇಕಾಗಿದೆ ಎಂದು ತಿರುಗೇಟು ನೀಡಿದರು.

ಶನಿವಾರ ಮಧ್ಯಾಹ್ನದವರಿಗೂ ನಾನು ಭೈರಮಂಗಲದಲ್ಲಿಯೇ ಇದ್ದು ರೈತರ ಮನವಿಗಳನ್ನು ಆಲಿಸುತ್ತೇನೆ. ಮುಖ್ಯಮಂತ್ರಿಗಳು ಚರ್ಚೆಗೆ ಬಂದರೆ ಎಲ್ಲವೂ ಸುಗಮವಾಗಿ ಆಗುತ್ತದೆ. ಸರಕಾರದವರೇ ಬೈರಮಂಗಲದಲ್ಲಿ144 ಸೆಕ್ಷನ್ ಹಾಕಲು ಹೊರಟಿದ್ದಾರೆ. ನಾವೇನೂ ಗಲಾಟೆ ಮಾಡಲು ಹೋಗುತ್ತಿಲ್ಲವಲ್ಲ ಎಂದು ತಿಳಿಸಿದರು.

ತಮ್ಮ ಬಳಿ ದುಬಾರಿ ಮೌಲ್ಯದ ವಾಚ್ ಇದೆ ಎಂದು ಶಾಸಕರು ಆರೋಪ ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅದೇನೋ ನನ್ನ ಬಳಿ ದುಬಾರಿ ವಾಚ್ ಇದೆ ಅಂತ ಹೇಳಿದ್ದಾರೆ ಒಬ್ಬರು, ನೋಡಿ.. ನಾನು ಕಟ್ಟಿರುವುದು ಡಾ. ಅಂಬೇಡ್ಕರ್ ಅವರ ಚಿತ್ರ ಇರುವ ಸಾಧಾರಣ ವಾಚ್. ಇದು ಎಚ್ಎಂಟಿ ಸಂಸ್ಥೆ ತಯಾರು ಮಾಡಿರುವುದು ಎಂದು ತಾವು ಕಟ್ಟಿದ್ದ ವಾಚ್ ಅನ್ನು ಮಾಧ್ಯಮಗಳಿಗೆ ಕುಮಾರಸ್ವಾಮಿ ತೋರಿಸಿದರು.

ಈ ಸರ್ಕಾರದ ಬಳಿ ಪ್ರತಿಯೊಂದಕ್ಕೂ ಎಸ್ಐಟಿ ಇದೆ. ಬೇಕಾದರೆ ನಮ್ಮ ಮನೆಗೆ ಕಳಿಸಿ ತನಿಖೇನೂ ಮಾಡಿಸಲಿ ಎಂದು ಹೆಚ್ ಡಿ ಕೆ‌ ಸವಾಲು ಹಾಕಿದರು.