ಬೆಂಗಳೂರು: ಬಗೆದಷ್ಟು ಹೊರಬರುತ್ತಿದೆ ಗ್ಯಾರೆಂಟಿ ಲೂಟಿಯ ಕರ್ಮಕಾಂಡ, ಇದು ಕೇವಲ ಭ್ರಷ್ಟಾಚಾರವಲ್ಲ, ಸರ್ಕಾರಿ ಪ್ರಾಯೋಜಿತ ಸೈಬರ್ ಕ್ರೈಂ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಾನು ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ನಡೆದಿರುವ 225 ಕೋಟಿ ಮಹಾ ಲೂಟಿಯ ಕರ್ಮಕಾಂಡವನ್ನ ಎಳೆಎಳೆಯಾಗಿ ಬಿಚ್ಚಿಡುತ್ತಿದ್ದರೆ, ಸಿಎಂ ಡಿ.ಕೆ.ಶಿವಕುಮಾರ್ ಅವರು ತಮಗೇನೂ ಸಂಬಂಧವೇ ಇಲ್ಲದಂತೆ ಮೌನಕ್ಕೆ ಶರಣಾಗಿದ್ದಾರೆ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳೇ, ಇದು ಕೇವಲ ಅಧಿಕಾರಿಗಳು ಮಾಡಿದ ತಾಂತ್ರಿಕ ಲೋಪ ಎಂದು ನುಣುಚಿಕೊಳ್ಳುವ ಪ್ರಯತ್ನ ಬೇಡ. ಇದು ಇಡೀ ಸರ್ಕಾರ, ಸಚಿವರು, ಗ್ಯಾರೆಂಟಿ ಅನುಷ್ಠಾನ ಸಮಿತಿಗಳು ಹಾಗೂ ಹ್ಯಾಕರ್‌ಗಳು ಸೇರಿ ನಡೆಸಿರುವ ದೇಶದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಸೈಬರ್ ಕ್ರೈಂ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಹಗರಣದಲ್ಲಿ ಬಡವರ ಹಣ ಲೂಟಿ ಹೊಡೆಯಲು ಸರ್ಕಾರವೇ ಒಂದು ಸೈಬರ್ ಕ್ರಿಮಿನಲ್ ಗ್ಯಾಂಗ್ ತರಹ ಕೆಲಸ ಮಾಡಿದೆ ಎನ್ನುವುದಲ್ಲಿ ಯಾವುದೇ ಅನುಮಾನವಿಲ್ಲ,
ಸಾಮಾನ್ಯ ಆಡಿಟ್‌ನಿಂದ ಈ ಹಗರಣ ಸಿಕ್ಕಿಬಿದ್ದಿಲ್ಲ. ಡೇಟಾ ಡಂಪ್ ತಂತ್ರಜ್ಞಾನ ಬಳಸಿ ಇಲಾಖೆಯ ಇಡೀ ದತ್ತಾಂಶವನ್ನು ಜಾಲಾಡಿದಾಗ ಈ ಡಿಜಿಟಲ್ ದರೋಡೆ ಬಯಲಾಗಿದೆ ಇದು ಸೈಬರ್ ಅಪರಾಧದ ಪಕ್ಕಾ ಮಾದರಿ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.
ಸಾಫ್ಟ್‌ವೇರ್ ಅಲ್ಗಾರಿದಮ್‌ಗಳನ್ನು ಬೇಕೆಂದೇ ಮ್ಯಾನಿಪುಲೇಟ್ ಮಾಡಿ, ಸತ್ತವರ ಖಾತೆಗಳಿಗೆ ಮತ್ತು ಒಂದೇ ಬ್ಯಾಂಕ್ ಖಾತೆಗೆ ಕೋಟಿ ಕೋಟಿ ಹಣ ವರ್ಗಾವಣೆ ಆಗುವಂತೆ ಪ್ರೋಗ್ರಾಮ್ ಮಾಡಲಾಗಿದೆ. ಇದು ಡಿಜಿಟಲ್ ಬ್ಯಾಂಕ್ ದರೋಡೆ ಅಲ್ಲದೆ ಮತ್ತೇನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ತಂತ್ರಜ್ಞಾನದ ಲೂಪ್‌ಹೋಲ್‌ಗಳನ್ನು ಸೃಷ್ಟಿಸಿದ್ದೇ ಈ ಕಮಿಷನ್ ಸರ್ಕಾರ ಎನ್ನುವುದು ಸ್ಪಷ್ಟವಾಗಿದೆ.
ಈ ಹಗರಣದಲ್ಲಿ ಬಯಲಾಗಿರುವ ಸತ್ಯ ಕೇಳಿದರೆ ಸೈಬರ್ ತಜ್ಞರೇ ಬೆಚ್ಚಿಬೀಳುತ್ತಾರೆ. ಕೆಲವು ಆಯ್ದ ನಕಲಿ ಫಲಾನುಭವಿಗಳು ಎರಡು ವರ್ಷಗಳಲ್ಲಿ ಪದೇ ಪದೇ ತಮ್ಮ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿದ್ದಾರೆ! ಒಮ್ಮೆ ಬಳಸಿದ ಖಾತೆಯನ್ನು ಐದಾರು ತಿಂಗಳ ನಂತರ ಮತ್ತೆ ಚಾಲ್ತಿಗೆ ತರಲಾಗಿದೆ. ಇನ್ನು ಕೆಲವು ಖಾತೆಗಳಿಗೆ ಒಂದು ತಿಂಗಳು ಹಣ ಜಮೆ ಮಾಡಿ, ನಂತರದ ಕೆಲವು ತಿಂಗಳು ಬಿಟ್ಟು, ಮತ್ತೆ ಹಣ ಜಮೆ ಮಾಡಲಾಗಿದೆ!
ಇದು ಕೇವಲ ಸೈಬರ್ ಕ್ರಿಮಿನಲ್‌ಗಳು ಮಾತ್ರ ಮಾಡಲು ಸಾಧ್ಯವಿರುವ ವ್ಯವಸ್ಥಿತ ‘ಮನಿ ಟ್ರ್ಯಾಕ್’ ಕಣ್ಣಾಮುಚ್ಚಾಲೆ ಆಟ. ಸಾಫ್ಟ್‌ವೇರ್ ಬ್ಯಾಕ್-ಎಂಡ್ ಕಂಟ್ರೋಲ್ ಹೊಂದಿರುವ ಸರ್ಕಾರದ ಉನ್ನತ ನಾಯಕರ ಮತ್ತು ಅಧಿಕಾರಿಗಳ ನೇರ ಶಾಮೀಲಾತಿ ಇಲ್ಲದೆ ಈ ಹೈಟೆಕ್ ಜಾಲ ಕಾರ್ಯಾಚರಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಅಶೋಕ್ ಹೇಳಿದ್ದಾರ
ಲೆಕ್ಕಕ್ಕೆ ಸಿಕ್ಕಿರುವುದು ಕೇವಲ 2.11 ಲಕ್ಷ ಮೃತ ಫಲಾನುಭವಿಗಳ ವಿವರ ಮಾತ್ರ. ಇನ್ನುಳಿದ 77,376 ಮೃತ ಫಲಾನುಭವಿಗಳ ಡಿಜಿಟಲ್ ದತ್ತಾಂಶವನ್ನು ಇಲಾಖೆಯು ನೀಡದೇ ಮುಚ್ಚಿಟ್ಟಿದೆ,ಈ 77 ಸಾವಿರಕ್ಕೂ ಹೆಚ್ಚು ಖಾತೆಗಳ ಸೈಬರ್ ಲಾಗ್‌ಗಳನ್ನು ಡಿಲೀಟ್ ಮಾಡಲು ಅಥವಾ ತಿದ್ದಲು ಪ್ರಯತ್ನ ನಡೆಯುತ್ತಿದೆಯೇ?
ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಡೇಟಾ ಕಳುವು ಮತ್ತು ಡೇಟಾ ತಿದ್ದುಪಡಿ ಮಾಡುವುದು ಸೈಬರ್ ಕಾನೂನಿನ ಅಡಿ ಶಿಕ್ಷಾರ್ಹ ಅಪರಾಧ. ಡಿಜಿಟಲ್ ಸಾಕ್ಷ್ಯಗಳನ್ನು ನಾಶಪಡಿಸಲು ಯಾರು ಆದೇಶ ನೀಡಿದ್ದು ಇದಕ್ಕೆಲ್ಲಾ ನೀವೇ ನೇರ ಹೊಣೆ ಎಂದು ಅಶೋಕ್ ಎಚ್ಚರಿಸಿದ್ದಾರೆ.ಅ
ಈ ಇಡೀ ಗೃಹಲಕ್ಷ್ಮಿ ಡಿಜಿಟಲ್ ಹಗರಣವನ್ನು ತಕ್ಷಣವೇ ಸಿಬಿಐ ಮತ್ತು ಕೇಂದ್ರ ಸೈಬರ್ ತನಿಖಾ ಸಂಸ್ಥೆಗಳಿಗೆ ಒಪ್ಪಿಸಬೇಕು.
ಯಾವ ಐಪಿ ಅಡ್ರೆಸ್‌ಗಳಿಂದ ಈ ದತ್ತಾಂಶಗಳನ್ನು ಮ್ಯಾನಿಪುಲೇಟ್ ಮಾಡಲಾಗಿದೆ? ಯಾವ ಸೈಬರ್ ನೆಟ್‌ವರ್ಕ್ ಮೂಲಕ ಈ ಕಮಿಷನ್ ಹಣ ವರ್ಗಾವಣೆಯಾಗಿದೆ ಎಂಬುದು ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

